ADVERTISEMENT

‘ಪ್ರಧಾನಿಯಾಗಿದ್ದರೂ ಶಾಸ್ತ್ರಿ ಬಳಿ ಸ್ವಂತ ಕಾರು ಇರಲಿಲ್ಲ’

ವಿಜ್ಞಾನಿ ಕೆ. ಕಸ್ತೂರಿರಂಗನ್ ಗುಣಗಾನ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 4:32 IST
Last Updated 26 ಅಕ್ಟೋಬರ್ 2019, 4:32 IST
ಕೆ. ಕಸ್ತೂರಿರಂಗನ್
ಕೆ. ಕಸ್ತೂರಿರಂಗನ್   

ಬೆಂಗಳೂರು: ‘ಪ್ರಧಾನಿಯಾಗಿದ್ದಾಗಲೂ ಓಡಾಡಲು ಸ್ವಂತ ಕಾರು ಹೊಂದಿರದ ಲಾಲ್‌ಬಹದ್ದೂರ್ ಶಾಸ್ತ್ರಿ,ರಾಜಕಾರಣಿಗಳು ಹಾಗೂ ಆಡಳಿತಗಾರರಿಗೆ ಮಾದರಿಯಾಗಿದ್ದಾರೆ’ ಎಂದುಬಾಹ್ಯಾಕಾಶ ವಿಜ್ಞಾನಿ ಕೆ. ಕಸ್ತೂರಿರಂಗನ್ ಗುಣಗಾನ ಮಾಡಿದರು.

ಜೈನ್‌ ಸಿಎಂಎಸ್ ಬಿಸಿನೆಸ್‌ ಸ್ಕೂಲ್‌ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂದೀಪ್‌ ಶಾಸ್ತ್ರಿ ರಚಿಸಿದ ‘ಲಾಲ್‌ ಬಹದ್ದೂರ್ ಶಾಸ್ತ್ರಿ ಪಾಲಿಟಿಕ್ಸ್ ಆ್ಯಂಡ್‌ ಬಿಯಾಂಡ್’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

‘ಜೀವನದಲ್ಲಿ ಸರಳತೆಯನ್ನು ರೂಢಿಸಿಕೊಂಡಿದ್ದ ಶಾಸ್ತ್ರಿ, ಶತ್ರುಗಳಿಲ್ಲದ ಸಜ್ಜನ ರಾಜಕಾರಣಿಯಾಗಿದ್ದರು.ಪ್ರಧಾನಿ ಹುದ್ದೆಗೇರಿದಾಗ ಶಾಸ್ತ್ರಿಯವರ ಬಳಿ ಸ್ವಂತ ಕಾರಿರಲಿಲ್ಲ. ಬಳಿಕ ಕುಟುಂಬದ ಸದಸ್ಯರ ಒತ್ತಾಯದ ಮೇರೆಗೆ ಬ್ಯಾಂಕಿನಲ್ಲಿ ಸಾಲ ಪಡೆದು, ಕಾರೊಂದನ್ನು ಖರೀದಿಸಿದ್ದರು. ಅನ್ನ ನೀಡುವ ರೈತ ಹಾಗೂ ದೇಶ ಕಾಯುವ ಯೋಧ ದೇಶದ ಬೆನ್ನೆಲುಬು ಎಂದು ನಂಬಿದ್ದರು’ ಎಂದು ತಿಳಿಸಿದರು.

ADVERTISEMENT

‘ಗಾಂಧೀಜಿ, ತಿಲಕ್‌ ಪ್ರಭಾವಕ್ಕೊಳಗಾಗಿದ್ದ ಶಾಸ್ತ್ರಿ ವಿದ್ಯಾಭ್ಯಾಸ ಮುಂದುವರಿಸಲಾಗದೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಅವರು ಜೈಲಿನಲ್ಲಿದ್ದಾಗ ಮಗಳು ತೀವ್ರತರ‌ ಕಾಯಿಲೆಯಿಂದ ನರಳುತ್ತಾಳೆ. 15 ದಿನಗಳು ಪೆರೋಲ್‌ ಮೇಲೆ ಹೊರಬಂದು, ಮಗಳಿಗೆ ಚಿಕಿತ್ಸೆ ಕೊಡಿಸುತ್ತಾರೆ. ಆದರೆ, ಮಗಳು ಬದುಕುಳಿಯುವುದಿಲ್ಲ. ಅಂತ್ಯಸಂಸ್ಕಾರ ಮುಗಿಸಿ, ಪೆರೋಲ್ ಅವಧಿ ಪೂರ್ಣಗೊಳ್ಳುವ ಮುನ್ನವೇ ಜೈಲಿಗೆ ತಾವಾಗಿಯೇ ಹಿಂದಿರುಗುತ್ತಾರೆ. ಅವರಲ್ಲಿನ ಬದ್ಧತೆಗೆ ಇದು ಉದಾಹರಣೆಯಾಗಿದೆ’ ಎಂದು ಹೇಳಿದರು.

ನ್ಯಾಷನಲ್ ಲಾ ಸ್ಕೂಲ್ ಯುನಿವರ್ಸಿಟಿಯ ಕುಲಪತಿ ಪ್ರೊ. ಸುಧೀರ್ ಕೃಷ್ಣನ್, ‘ಕಾಶಿ ವಿದ್ಯಾಪೀಠದಲ್ಲಿ ‘ದರ್ಶನ ಶಾಸ್ತ್ರ’ದಲ್ಲಿ ಅಧ್ಯಯನ ನಡೆಸಿದ ಬಳಿಕ ಅವರ ಹೆಸರಿನೊಂದಿಗೆ ಶಾಸ್ತ್ರಿ ಬಿರುದು ಸೇರಿಕೊಂಡಿತು.ದೇಶದ ಕೃಷಿ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಿದ ಹಿರಿಮೆ ಕೂಡಾ ಅವರಿಗೆ ಸೇರಬೇಕು. ಪ್ರಧಾನಿಯಾಗಿದ್ದ ಅಲ್ಪಾವಧಿಯಲ್ಲಿಯೇ ಸವಾಲು ಮೆಟ್ಟಿ ನಿಂತು, ಸಮರ್ಥ ಆಡಳಿತ ನೀಡಿದರು’ ಎಂದರು.

**

ಪುಸ್ತಕ: ಲಾಲ್‌ ಬಹದ್ದೂರ್ ಶಾಸ್ತ್ರಿ ಪಾಲಿಟಿಕ್ಸ್ ಆ್ಯಂಡ್‌ ಬಿಯಾಂಡ್

ಪ್ರಕಾಶನ: ರೂಪಾ ಪಬ್ಲಿಕೇಷನ್ಸ್

ಪುಟಗಳು:187

ಬೆಲೆ: ₹ 495

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.