ADVERTISEMENT

‘ಅಹಿಂಸಾ ಮಾರ್ಗ ಪಾಲಿಸಿ, ನಶೆಮುಕ್ತ ಸಮಾಜ ನಿರ್ಮಿಸಿ’

ಜೈನ ಸಮುದಾಯದ ಎಚ್.ಎಚ್. ಆಚಾರ್ಯ ಮಹಾಶ್ರಮಣಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 20:02 IST
Last Updated 23 ಜೂನ್ 2019, 20:02 IST
ಮಹಾಶ್ರಮಣಜಿ ಅವರಿಗೆ ನಿರ್ಮಲಾನಂದನಾಥಸ್ವಾಮೀಜಿ ಅವರು ಶಾಲು ಮತ್ತು ಏಲಕ್ಕಿ ಹಾರ ಆರ್ಪಿಸಿದರು. ಸಚಿವ ಡಿ.ಕೆ. ಶಿವಕುಮಾರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಇದ್ದರು –ಪ್ರಜಾವಾಣಿ ಚಿತ್ರ
ಮಹಾಶ್ರಮಣಜಿ ಅವರಿಗೆ ನಿರ್ಮಲಾನಂದನಾಥಸ್ವಾಮೀಜಿ ಅವರು ಶಾಲು ಮತ್ತು ಏಲಕ್ಕಿ ಹಾರ ಆರ್ಪಿಸಿದರು. ಸಚಿವ ಡಿ.ಕೆ. ಶಿವಕುಮಾರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಅಹಿಂಸಾ ಮಾರ್ಗ ಅನುಸರಿಸುವ ಜತೆಗೆ ನಶೆಮುಕ್ತ ಸಮಾಜ ನಿರ್ಮಾಣ ಮಾಡಬೇಕು’ ಎಂದು ಜೈನ ಸಮುದಾಯದ ಎಚ್.ಎಚ್. ಆಚಾರ್ಯ ಮಹಾಶ್ರಮಣಜಿ ಸ್ವಾಮೀಜಿ ಸಲಹೆ ನೀಡಿದರು.

ತೇರ ಪಂಥ್ ಸಮುದಾಯದ ವತಿಯಿಂದ ನಗರದಲ್ಲಿ ಭಾನುವಾರ ನೀಡಿದ ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಅಹಿಂಸಾ ಮಾರ್ಗದಿಂದ ಮಾತ್ರ ಸಮಾಜದಲ್ಲಿ ಶಾಂತಿ ಕಾಪಾಡಲು ಸಾಧ್ಯವಿದೆ’ ಎಂದರು.

‘ಧರ್ಮದ ಸಾರವನ್ನು ಅರಿತುಕೊಳ್ಳಬೇಕು ಮತ್ತು ಅದನ್ನು ಪಾಲನೆ ಮಾಡಬೇಕು. ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ದಾಸರಾಗದೆ ಬದುಕಿದರೆ ಜೀವನ ಸಾರ್ಥಕವಾಗುತ್ತದೆ. ಈ ಮೂರು ತತ್ವಗಳನ್ನು ಪಾಲಿಸುವುದಾಗಿ ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕು’ ಎಂದು ತಿಳಿಸಿದರು.‌

ADVERTISEMENT

ಹಿಂಸೆ ಮತ್ತು ಭೋಗ ಅಮಂಗಳದ ಸಂಕೇತವಾದರೆ, ಅಹಿಂಸೆ ಮತ್ತು ತಪಸ್ಸು ಮಂಗಳದ ಸಂಕೇತ. ಹೀಗಾಗಿ, ಅಹಿಂಸಾ ಮಾರ್ಗವನ್ನೇ ಎಲ್ಲರೂ ಅನುಸರಿಸಬೇಕು ಎಂದು ಹೇಳಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಮನುಷ್ಯನೇ ಅತ್ಯಂತ ಬುದ್ಧಿವಂತ ಜೀವಿ ಎಂದು ಹೇಳಿಕೊಂಡರೂ, ಮನುಷ್ಯರ ನಡುವೆ ಎರಡು ಮಹಾಯುದ್ಧಗಳು ಘಟಿಸಿಹೋಗಿವೆ. ಆ ರೀತಿಯ ಸನ್ನಿವೇಶಗಳುಮತ್ತೆ ಎದುರಾಗಬಾರದು ಎಂದರೆ ಜಗತ್ತಿನಲ್ಲಿ ಶಾಂತಿ ನೆಲೆಸಬೇಕು. ಅದಕ್ಕೆ ಅಹಿಂಸಾ ಮಾರ್ಗವೊಂದೇ ದಾರಿ’ ಎಂದು ಪ್ರತಿಪಾದಿಸಿದರು.

ಮೈಸೂರಿನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ‘ಮೈಸೂರಿನ ಒಡೆಯರಿಗೂ ಜೈನ ಧರ್ಮಕ್ಕೂ ಬಿಡಿಸಲಾಗದ ಸಂಬಂಧ ಇದೆ. ಶ್ರವಣಬೆಳಗೊಳ ಸೇರಿ ಜೈನ ಧರ್ಮದ ಪವಿತ್ರ ಕ್ಷೇತ್ರಗಳ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ಮೈಸೂರಿನ ಒಡೆಯರು ನೀಡಿದ್ದಾರೆ’ ಎಂದು ಹೇಳಿದರು.

ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಎಲ್ಲಾ ಧರ್ಮಗಳು ಶಾಂತಿಯ ತತ್ವವನ್ನೇ ಪ್ರತಿಪಾದಿಸುತ್ತವೆ. ಆದರೆ, ಜೈನ ಧರ್ಮದಲ್ಲಿರುವಷ್ಟು ಅಹಿಂಸಾ ಮಾರ್ಗ ಬೇರೆಲ್ಲೂ ಇಲ್ಲ. ಶಾಂತಿ ಪ್ರಿಯರಾದ ಈ ಸಮುದಾಯದ ಜನರೊಂದಿಗೆ ಸರ್ಕಾರ ಸದಾ ಇದೆ’ ಎಂದು ಭರವಸೆ ನೀಡಿದರು. ಕಾರ್ಯಕ್ರಮ ಮುಗಿದ ಬಳಿಕ ಬಂದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮಹಾಶ್ರಮಣಜಿ ಅವರ ಆಶೀರ್ವಾದ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.