ADVERTISEMENT

ಜಾನಪದ ಕಲೆ, ಸಾಹಿತ್ಯದ ಪುನರುತ್ಥಾನಕ್ಕೆ ಸಕಾಲ: ನಿವೃತ್ತ IAS ಅಧಿಕಾರಿ ಅಭಿಮತ

ಕನ್ನಡ ಜಾನಪದ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 14:35 IST
Last Updated 25 ಜೂನ್ 2025, 14:35 IST
<div class="paragraphs"><p>ಕನ್ನಡ ಜಾನಪದ ಸಮ್ಮೇಳನವನ್ನು ಸಿ.ಸೋಮಶೇಖರ್ ಉದ್ಘಾಟಿಸಿದರು. </p></div>

ಕನ್ನಡ ಜಾನಪದ ಸಮ್ಮೇಳನವನ್ನು ಸಿ.ಸೋಮಶೇಖರ್ ಉದ್ಘಾಟಿಸಿದರು.

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಆಧುನಿಕ ವಿಜ್ಞಾನ, ತಂತ್ರಜ್ಞಾನದ ಈ ಯುಗದಲ್ಲಿ ಜಾನಪದ ಕಲೆ ಮತ್ತು ಸಾಹಿತ್ಯದ ಪುನರುತ್ಥಾನ ಸಮರೋಪಾದಿಯಲ್ಲಿ ನಡೆಯಬೇಕು. ಈ ಕಲೆಗೆ ಪ್ರತ್ಯೇಕ ವಾಹಿನಿಯನ್ನು ಸರ್ಕಾರ ಪ್ರಾರಂಭಿಸಬೇಕು’ ಎಂದು ನಿವೃತ್ತ ಐಎಎಸ್ ಅಧಿಕಾರಿ ಸಿ. ಸೋಮಶೇಖರ್ ಆಗ್ರಹಿಸಿದರು. 

ADVERTISEMENT

ಕನ್ನಡ ಜಾನಪದ ಪರಿಷತ್ ಗೋವಿಂದರಾಜನಗರ ವಿಧಾನಸಭೆ ಕ್ಷೇತ್ರ ಘಟಕ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಥಮ ರಾಜ್ಯ ಕನ್ನಡ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ, ಮಾತನಾಡಿದರು. 

‘ಜಾನಪದ ಸಾಹಿತ್ಯವು ಜೀವನಾನುಭವದ ವಿಶ್ವವಿದ್ಯಾಲಯದಲ್ಲಿ ಅರಳಿದ ಸುಂದರ ಪುಷ್ಪ. ಈ ಸಾಹಿತ್ಯ ಉಳಿಸುವ ಕೆಲಸವನ್ನು ಜಾನಪದ ಸಂಶೋಧನಾ ಕೇಂದ್ರಗಳು ಮಾಡಬೇಕು. ಜಾನಪದ ಕಲೆ, ಸಾಹಿತ್ಯದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾನಪದ ಸಂಸ್ಥೆಗಳಿಗೆ ವಾರ್ಷಿಕ ಶಾಶ್ವತ ಅನುದಾನವನ್ನು ಸರ್ಕಾರ ಒದಗಿಸಬೇಕು’ ಎಂದು ಒತ್ತಾಯಿಸಿದರು.

‘ಯೂಟ್ಯೂಬ್‌ನಲ್ಲಿ ಮೂಲ ಸಂಸ್ಕೃತಿ ಬಿತ್ತರಿಸುವ ಕೆಲಸವಾಗಬೇಕು. ಜಾನಪದ ಅಕಾಡೆಮಿಗಳು, ಜಾನಪದ ವಿಶ್ವವಿದ್ಯಾಲಯಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಜಾನಪದ ಕ್ಷೇತ್ರದ ವಿದ್ವಾಂಸರನ್ನು ಗುರುತಿಸಿ, ಗೌರವಿಸುವ ಕೆಲಸವೂ ಆಗಬೇಕು. ಜಾನಪದ ಸಾಹಿತ್ಯಕ್ಕೆ ಸಂಬಂಧಿಸಿದ ಮಾಸಿಕ ಪತ್ರಿಕೆ ಪ್ರಕಟಿಸಬೇಕು. ಇದರ ಮೂಲಕ ಜಾನಪದ ಕಲಾ ಸಾಧಕರನ್ನು ಪರಿಚಯಿಸಬೇಕು’ ಎಂದು ಹೇಳಿದರು. 

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ‘‍ವಾಸ್ತವಕ್ಕೆ ದೂರವಾದ ಕಾರ್ಯಕ್ರಮಗಳನ್ನು ರಿಯಾಲಿಟಿ ಶೋ ಎಂದು ಕರೆಯುತ್ತಿದ್ದೇವೆ. ಇದು ಭಯ ಹುಟ್ಟಿಸಲಿದೆ. ಮಕ್ಕಳನ್ನು ಶೋಕೇಸ್‌ನಲ್ಲಿ ಇಡುತ್ತಿದ್ದೇವೆ. ಮಕ್ಕಳು ಮಣ್ಣಿನ ವಾಸನೆ, ಸಂಬಂಧದ ಬಗ್ಗೆ ತಿಳಿಯಬೇಕು. ಇಲ್ಲವಾದಲ್ಲಿ ಮಾಯಾಲೋಕದಲ್ಲಿ ತೇಲುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ, ‘ಶಾಲೆಗಳಲ್ಲಿ ಜಾನಪದ ಗೀತೆಗಳನ್ನು ಹಾಡಿಸುವ ಮೂಲಕ ಈ ಕಲಾ ಪ್ರಕಾರವನ್ನು ಬೆಳೆಸಬೇಕು. ಜಾನಪದ ಗೀತೆಗಳು ಬದುಕಿಗೆ ಹತ್ತಿರವಾದವುಗಳಾಗಿವೆ’ ಎಂದು ಅಭಿಪ್ರಾಯಪಟ್ಟರು. 

ಇದಕ್ಕೂ ಮೊದಲು ಪುರಭವನದಿಂದ ರವೀಂದ್ರ ಕಲಾಕ್ಷೇತ್ರದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.