ರಾಜರಾಜೇಶ್ವರಿನಗರ: ನಾಲ್ಕು ದಶಕಗಳಿಂದ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ 1,500 ಬಡ ರೈತರಿಗೆ ಉಳುಮೆ ಚೀಟಿ ಸಿಕ್ಕಿಲ್ಲ. ಜಮೀನುಗಳಿಗೆ ಖಾತೆಯಾಗುತ್ತಿಲ್ಲ. ಊರಿಗೆ ಬಿಎಂಟಿಸಿ ಬಸ್ ಬರುತ್ತಿಲ್ಲ...
ಬೆಂಗಳೂರು ನಗರ ಜಿಲ್ಲಾಡಳಿತ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ, ಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಚಿಕ್ಕನಹಳ್ಳಿಯಲ್ಲಿ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಕೇಳಿ ಬಂದ ದೂರುಗಳಿವು.
ದೊಡ್ಡೇರಿಯ ಗ್ರಾಮ ಪಂಚಾಯಿತಿ ಸದಸ್ಯ ಉಮಾಶಂಕರ್ ‘ಹಲವು ದಶಕಗಳಿಂದ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ನೂರಾರು ಕುಟುಂಬಗಳಿಗೆ ಈ ಜಮೀನೊಂದೇ ಆಸರೆ. ತಾವರೆಕೆರೆ ಹೋಬಳಿ ವ್ಯಾಪ್ತಿಯ 1,800 ಕುಟುಂಬಗಳಿಗೆ ಉಳುಮೆ ಚೀಟಿ ಕೊಡಿಸಿ’ ಎಂದು ಮನವಿ ಮಾಡಿದರು.
ದೂರುಗಳಿಗೆ ಪ್ರತಿಕ್ರಿಯಿಸಿದ ಶಾಸಕ ಎಸ್.ಟಿ. ಸೋಮಶೇಖರ್ ಅವರು,‘ಮಾಜಿ ಶಾಸಕರು ಮತ್ತು ವಕೀಲರ ಕುಟುಂಬಕ್ಕೆ ತಲಾ 18 ಎಕರೆ ಜಮೀನು ಮಂಜೂರಾಗಿದೆ. ಅವರಿಗೆ ಸಾಗುವಳಿ ಚೀಟಿ ಸಿಕ್ಕದೆ. ಬಡವರು ಮನುಷ್ಯರಲ್ಲವೇ’ ಎಂದು ಕಂದಾಯ ಅಧಿಕಾರಿಗಳನ್ನು ಪ್ರಶ್ನಿಸಿದರು.
‘ಎಲ್ಲರಿಗೂ ನ್ಯಾಯ ಕೊಡಿಸಲು, ಸರ್ಕಾರದ ಸವಲತ್ತನ್ನು ಮನೆ ಬಾಗಿಲಿಗೆ ತಲುಪಿಸಲು ಗ್ರಾಮ ಪಂಚಾಯಿತಿ, ವಾರ್ಡ್ ಮಟ್ಟದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸುವುದಾಗಿ’ ಅವರು ಭರವಸೆ ನೀಡಿದರು.
ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್ ಎಚ್.ಶ್ರೀನಿವಾಸ್, ಉಪ ತಹಸಿಲ್ದಾರ್ ಕೆಂಪೇಗೌಡ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಬಿಂದು, ಹಾಪ್ ಕಾಮ್ಸ್ ನಿರ್ದೇಶಕ ಎಂ.ಜೈಕುಮಾರ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ನೀಲವ್ವ ಅಂದಪ್ಪನಹಳ್ಳಿ ಮತ್ತಿತರರು ಹಾಜರಿದ್ದರು.
ಕಾರ್ಯಕ್ರಮದಲ್ಲಿ 595 ಕುಟುಂಬಗಳಿಗೆ ಹಕ್ಕುಪತ್ರ, ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಇದರೊಂದಿಗೆ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು. ಕೃಷಿಉಪಕರಣ ಸೇರಿದಂತೆ ವಿವಿಧ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ನಾಗರಾಜಯ್ಯ, ಉಪಾಧ್ಯಕ್ಷೆ ಸೇರಿ ಗ್ರಾಮ ಪಂಚಾಯಿತಿಯ ಹಲವು ಸದಸ್ಯರು ಸಭೆಗೆ ಗೈರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.