ADVERTISEMENT

ಮುಖ್ಯಮಂತ್ರಿ ಕಂಡಲ್ಲಿ ಘೇರಾವ್‌ಗೆ ನಿರ್ಧಾರ

ಪರ್ಯಾಯ ಜನತಾ ಅಧಿವೇಶನದಲ್ಲಿ ನಿರ್ಣಯ * ಕಾಯ್ದೆ ತಿದ್ದುಪಡಿ ಕೈಬಿಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 21:56 IST
Last Updated 26 ಸೆಪ್ಟೆಂಬರ್ 2020, 21:56 IST
ಎಪಿಎಂಸಿ, ಭೂಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ 'ಕರ್ನಾಟಕ ರಾಜ್ಯ ರೈತ ಸಂಘ' ಮತ್ತು ಹಸಿರು ಸೇನೆ ಸದಸ್ಯರು ನಗರದ ಮೌರ್ಯ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು -ಪ್ರಜಾವಾಣಿ ಚಿತ್ರ/ ರಂಜು ಪಿ
ಎಪಿಎಂಸಿ, ಭೂಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ 'ಕರ್ನಾಟಕ ರಾಜ್ಯ ರೈತ ಸಂಘ' ಮತ್ತು ಹಸಿರು ಸೇನೆ ಸದಸ್ಯರು ನಗರದ ಮೌರ್ಯ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು -ಪ್ರಜಾವಾಣಿ ಚಿತ್ರ/ ರಂಜು ಪಿ   

ಬೆಂಗಳೂರು: ‘ಬಿಜೆಪಿ ಸರ್ಕಾರಗಳ ರೈತ, ದಲಿತ ಹಾಗೂ ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳನ್ನು ವಾಪಸ್‌ ಪಡೆಯಲು ಹೋರಾಟ ತೀವ್ರಗೊಳಿಸಲಾಗುವುದು. ಮುಖ್ಯಮಂತ್ರಿಯವರಿಗೆ ಕಂಡಲ್ಲಿ ಘೇರಾವ್ ಹಾಕಲಾಗುವುದು’ ಎಂದು ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿ ಹೇಳಿದೆ.

ಈ ಕುರಿತು ನಿರ್ಣಯ ಕೈಗೊಂಡಿರುವ ಸಮಿತಿಯು, ಸೆ.28ರ ರಾಜ್ಯ ಬಂದ್‌ ಯಶಸ್ವಿಗೊಳಿಸಲು ತೀರ್ಮಾನಿಸಿತು.

‘ಕಪಟ ಮಾರ್ಗಗಳ ಮೂಲಕ ವಿಧಾನಸಭೆಯಲ್ಲಿ ಮಸೂದೆಗಳಿಗೆ ಒಪ್ಪಿಗೆ ಪಡೆಯಲಾಗಿದೆ. ಇವುಗಳು ಜಾರಿಯಾಗಲು ಬಿಡುವುದಿಲ್ಲ. ಇದುವರೆಗೆ ನಡೆಸಿದ ಧರಣಿ ಸತ್ಯಾಗ್ರಹವನ್ನು ದುಡಿಯುವ ಜನರ ಜನಸಂಗ್ರಾಮವನ್ನಾಗಿ ಪರಿವರ್ತಿಸುತ್ತೇವೆ’ ಎಂದು ಸಮಿತಿ ಹೇಳಿದೆ.

ADVERTISEMENT

ಪರ್ಯಾಯ ಜನತಾ ಅಧಿವೇಶನದ ನಿರ್ಣಯಗಳು

* ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಖಾಸಗೀಕರಣಕ್ಕೆ ಧಿಕ್ಕಾರ. ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ತರಲು ಆಗ್ರಹ

* ಯಾವುದೇ ಸಮುದಾಯದ ಬಡವರಿಗೆ ಮೀಸಲಾತಿ ಸಿಗುವುದನ್ನು ಅಧಿವೇಶನ ವಿರೋಧಿಸುವುದಿಲ್ಲ. ಆದರೆ, ಅದು ವೈಜ್ಞಾನಿಕವಾಗಿರಬೇಕು

* ಶೇ 3ಕ್ಕಿಂತ ಕಡಿಮೆ ಇರುವ ಜನಸಂಖ್ಯೆಗೆ ಶೇ 10ರಷ್ಟು ಮೀಸಲಾತಿ ನೀಡುವ ಮೇಲ್ಜಾತಿ ಪಕ್ಷಪಾತಿ ನಡೆಯನ್ನು ಅಧಿವೇಶನ ಖಂಡಿಸುತ್ತದೆ.

* ದುರ್ಬಲರ ವಿರೋಧಿ ಕಾಯ್ದೆಗಳನ್ನು ಸೂಕ್ತ ರೀತಿಯಲ್ಲಿ ತಿದ್ದುಪಡಿ ಮಾಡಬೇಕು.

ಕರ್ನಾಟಕ ಬಂದ್‌ಗೆ ಬೆಂಬಲ
ಸೆ.28ರಂದು ನಡೆಸಲು ಉದ್ದೇಶಿಸಲಾಗಿರುವ ಕರ್ನಾಟಕ ಬಂದ್‌ಗೆ ಹಲವು ಸಂಘಟನೆಗಳು, ರಾಜಕೀಯ ಪಕ್ಷಗಳು ಬೆಂಬಲ ನೀಡಿವೆ.

‘ಕೋವಿಡ್ ಪಿಡುಗಿನ ಸಂಕಷ್ಟಕಾಲದಲ್ಲಿ ಕೃಷಿ, ಪರಿಸರ ಮತ್ತು ಕಾರ್ಮಿಕ ಸಂಬಂಧಿ ಕಾಯ್ದೆಗಳಿಗೆ ತರಲಾಗುತ್ತಿರುವ ತಿದ್ದುಪಡಿಗಳು ರೈತ ಕಾರ್ಮಿಕರ ಪರವಾಗಿರದೆ ಕಾರ್ಪೊರೇಟ್ ಕಂಪನಿಗಳ ಸಂಪತ್ತನ್ನು ಇನ್ನಷ್ಟು ಹೆಚ್ಚಿಸುವಂತಿವೆ. ಇದನ್ನು ವಿರೋಧಿಸಿ ನಡೆಯುತ್ತಿರುವ ಬಂದ್‌ಗೆ ನಮ್ಮ ಬೆಂಬಲವಿದೆ’ ಎಂದು ಸಮುದಾಯ ಕರ್ನಾಟಕ ಸಂಘಟನೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.