ADVERTISEMENT

ಜಯದೇವ ಮೇಲ್ಸೇತುವೆ ಬಂದ್‌

ನಮ್ಮ ಮೆಟ್ರೊ ಕಾಮಗಾರಿಗಾಗಿ 20ರಿಂದ ನೆಲಸಮ ಕಾರ್ಯ ಆರಂಭ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 20:31 IST
Last Updated 17 ಜನವರಿ 2020, 20:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ, ರೀಚ್‌ 5ನಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಇದಕ್ಕಾಗಿ ಜಯದೇವ ಮೇಲ್ಸೇತುವೆಯನ್ನು ನೆಲಸಮಗೊಳಿಸಲಾಗುತ್ತಿದೆ. ಮೇಲ್ಸೇತುವೆ ನೆಲಸಮಗೊಳಿಸುವ ಕಾಮಗಾರಿ ಜ.20ರಿಂದ ಕೈಗೆತ್ತಿಕೊಳ್ಳಲಾಗುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಹೇಳಿದೆ.

ಮೇಲ್ಸೇತುವೆ ಮೂಲಕ ಎಲ್ಲ ಪ್ರಕಾರದ ವಾಹನಗಳ ಸಂಚಾರ ನಿಷೇಧಿಸಲು ಸಂಚಾರ ಪೊಲೀಸ್ ಹಾಗೂ ಪೊಲೀಸ್‌ ಇಲಾಖೆ ಅನುಮೋದನೆ ನೀಡಿದೆ ಎಂದೂ ನಿಗಮ ತಿಳಿಸಿದೆ.

ದಶಕದ ಹಿಂದಿನ ಮೇಲ್ಸೇತುವೆ: ಹನ್ನೆರಡು ವರ್ಷಗಳ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ₹21 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಜಯದೇವ ಮೇಲ್ಸೇತುವೆಯುಬನ್ನೇರುಘಟ್ಟ ಮಾರ್ಗದಲ್ಲಿ ಸಿಗ್ನಲ್ ಮುಕ್ತ ಸಂಚಾರಕ್ಕೆ ಕಾರಣವಾಗಿತ್ತು.

ADVERTISEMENT

ಈಗ ಮೇಲ್ಸೇತುವೆಯನ್ನು ನೆಲಸಮಗೊಳಿಸಲಾಗುತ್ತದೆ. ಆದರೆ, ಈಗಿರುವ ಕೆಳಸೇತುವೆಯನ್ನು ಹಾಗೆಯೇ ಉಳಿಸಿಕೊಳ್ಳಲಾಗುತ್ತದೆ.

ಪರ್ಯಾಯ ಸಂಚಾರ ವ್ಯವಸ್ಥೆ

* ಹೊರವರ್ತುಲ ರಸ್ತೆಯಲ್ಲಿನ 18ನೇ ಮುಖ್ಯರಸ್ತೆಯ ಮಾರೇನಹಳ್ಳಿಯಿಂದ 29ನೇ ಮುಖ್ಯರಸ್ತೆಯ ಬಿಟಿಎಂ 2ನೇ ಹಂತದ ನಡುವಿನ ರಸ್ತೆಯನ್ನು ನಿತ್ಯ ರಾತ್ರಿ 10.30ರಿಂದ ಬೆಳಿಗ್ಗೆ 5.30ರವರೆಗೆ ಎಲ್ಲ ರೀತಿಯ ವಾಹನ ಸಂಚಾರಕ್ಕೆ ಎರಡು ಮಾರ್ಗವನ್ನು ಮುಚ್ಚಲಾಗುವುದು. ಈ ಮಾರ್ಗದಲ್ಲಿ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಬಿಎಂಟಿಸಿ ಬಸ್‌ಗಳು, ಆಂಬುಲೆನ್ಸ್‌, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ

* ಕಾರು, ಖಾಸಗಿ ಬಸ್, ಆಟೋ, ಲಾರಿ, ಟ್ರ್ಯಾಕ್ಟರ್‌, ಟ್ರಾಲಿಗಳು ಸೇರಿದಂತೆ ಇತರೆ ವಾಹನಗಳ ಸಂಚಾರವನ್ನು ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ನಿಷೇಧಿಸಲಾಗಿದೆ. ಕಾರು ಮತ್ತು ಆಟೊಗಳು ಹೊರವರ್ತುಲ ರಸ್ತೆ ಉದ್ದಕ್ಕೂ ಸಂಚರಿಸದೆ, ಬಿಟಿಎಂ 2ನೇ ಹಂತದ 16ನೇ ಮುಖ್ಯರಸ್ತೆ ಮತ್ತು 29ನೇ ಮುಖ್ಯರಸ್ತೆ ಮೂಲಕ ಹಾದುಹೋಗಬಹುದು.

* ಮಾರೇನಹಳ್ಳಿ ರಸ್ತೆಯ 18ನೇ ಮುಖ್ಯರಸ್ತೆಯಿಂದ ಸೆಂಟ್ರಲ್ ಸಿಲ್ಕ್‌ ಬೋರ್ಡ್ ಜಂಕ್ಷನ್‌ವರೆಗಿನ ಒಳ ರಸ್ತೆಗಳು ಅಂದರೆ 36ನೇ ಕ್ರಾಸ್‌, 28ನೇ ಮುಖ್ಯರಸ್ತೆ, ಈಸ್ಟ್‌ ಎಂಡ್ ರಸ್ತೆ, ಜಯನಗರ, ತಾವರೆಕೆರೆ ಮುಖ್ಯರಸ್ತೆ ಹಾಗೂ ಬಿಟಿಎಂ 2ನೇ ಹಂತದ 29ನೇ, 16ನೇ ಮತ್ತು 7ನೇ ಮುಖ್ಯರಸ್ತೆಗಳಲ್ಲಿ ವಾಹನಗಳ ನಿಲುಗಡೆಯನ್ನು ಎಲ್ಲ ಸಮಯದಲ್ಲೂ ನಿಷೇಧಿಸಲಾಗಿದೆ.

* ಜಯದೇವ ಕೆಳಸೇತುವೆಯ ಎರಡೂ ಮಾರ್ಗಗಳ ವಾಹನ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನಿಗಮ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.