ADVERTISEMENT

ಜಯದೇವ ಸಂಸ್ಥೆಗೆ ನಾಲ್ಕನೇ ಬಾರಿ ‘ಎನ್‌ಎಬಿಎಚ್’ ಮಾನ್ಯತೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 20:38 IST
Last Updated 6 ಡಿಸೆಂಬರ್ 2025, 20:38 IST
   

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ನಾಲ್ಕನೆ ಬಾರಿಗೆ ಎನ್‌ಎಬಿಎಚ್ (ಆಸ್ಪತ್ರೆಗಳು ಮತ್ತು ಆರೋಗ್ಯ ಪೂರೈಕೆದಾರರ ರಾಷ್ಟ್ರೀಯ ಮಾನ್ಯತೆ ಮಂಡಳಿ) ಮಾನ್ಯತೆ ಪಡೆದಿದೆ.

ಹೆಚ್ಚು ಬಾರಿ ಈ ಮನ್ನಣೆ ಪಡೆದ ರಾಜ್ಯದ ಏಕೈಕ ಸರ್ಕಾರಿ ಸ್ವಾಯತ್ತ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಸ್ಪತ್ರೆ ಒದಗಿಸುವ ಗುಣಮಟ್ಟದ ಚಿಕಿತ್ಸೆ, ಆರೈಕೆ ಹಾಗೂ ವೈದ್ಯಕೀಯ ಸೌಲಭ್ಯಗಳ ಆಧಾರದ ಮೇಲೆ ಈ ಮಾನ್ಯತೆ ನೀಡಲಾಗುತ್ತದೆ. 

‘ಭಾರತದ ಗುಣಮಟ್ಟ ಮಂಡಳಿಯ ಗುಣಮಟ್ಟ ತಜ್ಞರ ತಂಡವು ಕಳೆದ ಜುಲೈನಲ್ಲಿ ಸಂಸ್ಥೆಗೆ ಭೇಟಿ ನೀಡಿತ್ತು. ವೈದ್ಯಕೀಯ ಸೇವೆ ಹಾಗೂ ಸೌಲಭ್ಯಗಳ ಪರಿಶೀಲನೆ ನಡೆಸಿತ್ತು. ಸ್ವಚ್ಛತೆ, ರೋಗಿಗಳ ಮೇಲಿನ ನಿಗಾ ವ್ಯವಸ್ಥೆ, ಕಡತಗಳ ನಿರ್ವಹಣೆ, ರೋಗಿಗಳ ಆರೈಕೆ ಮತ್ತು ಚಿಕಿತ್ಸಾ ವಿಧಾನಗಳು, ಹೊರರೋಗಿಗಳ ವಿಭಾಗ, ಒಳರೋಗಿಗಳ ವಿಭಾಗ, ತುರ್ತು ಚಿಕಿತ್ಸಾ ವಿಭಾಗ ಒಳಗೊಂಡು ಎಲ್ಲ ವಿಭಾಗಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿತ್ತು. ಎಲ್ಲ ವಿಭಾಗಗಳಲ್ಲಿ ನಿಗದಿತ ಮಾನದಂಡ ಹೊಂದಿದ್ದರಿಂದ ಈ ಮಾನ್ಯತೆ ದೊರೆತಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಬಿ. ದಿನೇಶ್ ತಿಳಿಸಿದ್ದಾರೆ.

ADVERTISEMENT

‘ಪ್ರತಿ ಮೂರು ವರ್ಷಕ್ಕೊಮ್ಮೆ ನೀಡುವ ಈ ಮಾನ್ಯತಾ ಪ್ರಮಾಣ ಪತ್ರವನ್ನು 2015ರಿಂದಲೂ ಸತತವಾಗಿ ಸಂಸ್ಥೆ ಪಡೆಯುತ್ತಿದೆ. ಎಲ್ಲರಿಗೂ ಕಡಿಮೆ ಮತ್ತು ರಿಯಾಯಿತಿ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ನಿತ್ಯ 1,800ಕ್ಕೂ ಅಧಿಕ ಮಂದಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಾರೆ’ ಎಂದು ಹೇಳಿದ್ದಾರೆ.

ಈ ಮಾನ್ಯತೆಯು ಸಂಸ್ಥೆಯ ಗುಣಮಟ್ಟದ ವೈದ್ಯಕೀಯ ಸೇವೆಗೆ ಸಾಕ್ಷಿ. ಸಂಸ್ಥೆಗೆ ಬರುವ ಹೃದ್ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ
ಡಾ.ಬಿ. ದಿನೇಶ್, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.