ಬೆಂಗಳೂರು: ಹೃದಯ ಸಂಬಂಧಿ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಆಫ್ರಿಕಾ ಖಂಡದ ಘಾನಾದ ಆರು ವರ್ಷದ ಬಾಲಕನಿಗೆ ಇಲ್ಲಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು ಯಶಸ್ವಿಯಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಎದೆ ನೋವು ಮತ್ತು ಉಸಿರಾಟ ಸಮಸ್ಯೆಯ ಲಕ್ಷಣಗಳೊಂದಿಗೆ ಸಂಸ್ಥೆಗೆ ಜುಲೈ 23ರಂದು ಭೇಟಿ ನೀಡಿದ್ದ ಬಾಲಕನನ್ನು ದಾಖಲಿಸಿಕೊಳ್ಳಲಾಯಿತು. ಘಾನಾದಲ್ಲಿ ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆಗೆ ಸೌಲಭ್ಯವಿಲ್ಲದಿರುವುದರಿಂದ ಇಲ್ಲಿಗೆ ಕರೆತರಲಾಗಿತ್ತು. ಬಾಲಕನ ಹೃದಯದ ಬಲ ಕುಹರದ ಹೊರಹರಿವಿನಲ್ಲಿ ಅಡಚಣೆ (ಆರ್‌ವಿಒಟಿ) ಇರುವುದು ಪರೀಕ್ಷೆಯಿಂದ ದೃಢಪಟ್ಟಿತು. ಜುಲೈ 29ರಂದು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆ.8ರಂದು ಆಸ್ಪತ್ರೆಯಿಂದ ತೆರಳಿದ್ದು, ಹೃದಯ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥೆಯ ವೈದ್ಯರು ತಿಳಿಸಿದ್ದಾರೆ.
ಸಂಸ್ಥೆಯ ಮಕ್ಕಳ ಹೃದ್ರೋಗ ವಿಜ್ಞಾನದ ಪ್ರಾಧ್ಯಾಪಕ ಡಾ. ಜಯರಂಗನಾಥ್ ಮತ್ತು ಅವರ ತಂಡವು ಹೃದಯ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಿತ್ತು. ಡಾ.ಪಿ.ಕೆ. ಸುನಿಲ್ ನೇತೃತ್ವದಲ್ಲಿ ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದ್ದು, ಡಾ. ರಶ್ಮಿ, ಡಾ. ಹರೀಶ ಮುಖ್ರಿ ಹಾಗೂ ಡಾ. ಪುಷ್ಪ ಅವರನ್ನು ಈ ತಂಡ ಒಳಗೊಂಡಿದೆ.
ಘಾನಾದ ರೋಟರಿ ಇಂಟರ್‌ನ್ಯಾಷನಲ್, ಬೆಂಗಳೂರಿನ ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 3190 ಮತ್ತು ರೋಟರಿ ನೀಡಿ ಹಾರ್ಟ್ ಫೌಂಡೇಷನ್ ಸಹಯೋಗದಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
‘ಪ್ರತಿ ಸಾವಿರ ಶಿಶುಗಳಲ್ಲಿ ಎಂಟರಿಂದ ಹತ್ತು ಮಕ್ಕಳಿಗೆ ಈ ರೀತಿ ಸಂಕೀರ್ಣ ಜನ್ಮಜಾತ ಕಾಯಿಲೆ ಇರಲಿದೆ. ಹೃದಯ ರಂಧ್ರಗಳು ಕಾಣಿಸಿಕೊಂಡಾಗ ಜ್ವರ, ಕೆಮ್ಮು, ನ್ಯುಮೋನಿಯಾ, ಬೆಳವಣಿಗೆ ಕುಂಠಿತ, ಚರ್ಮ ಮತ್ತು ಉಗುರುಗಳು ನೀಲಿ ಬಣ್ಣಕ್ಕೆ ತಿರುಗುವಿಕೆ, ತೂಕ ನಷ್ಟದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.