ಬೆಂಗಳೂರು: ಜಯನಗರದ 8ನೇ ಬ್ಲಾಕ್‌ನಲ್ಲಿ ಕಾನೂನು ಉಲ್ಲಂಘಿಸಿ ಹಾಗೂ ರಾಜಕಾಲುವೆಗಳ ಮೇಲೆ ಕಟ್ಟಡಗಳು ನಿರ್ಮಾಣವಾಗುತ್ತಿರುವ ಬಗ್ಗೆ ಆರು ತಿಂಗಳಿಂದ ದೂರು ನೀಡುತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
‘2024ರ ನವೆಂಬರ್ 13ರಿಂದ 2025ರ ಮಾರ್ಚ್ 25ರವರೆಗೆ ಬಿಬಿಎಂಪಿಯ ಮುಖ್ಯ ಆಯುಕ್ತರು, ದಕ್ಷಿಣ ವಲಯದ ಆಯುಕ್ತರು, ಜಂಟಿ ಆಯುಕ್ತರು, ವಾರ್ಡ್ 179ರ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ಹಲವು ಬಾರಿ ದೂರು ನೀಡಿದ್ದೇನೆ. ಆದರೆ ಈವರೆಗೆ ಕ್ರಮ ಕೈಗೊಂಡಿಲ್ಲ. ಕಟ್ಟಡಗಳು ನಿರ್ಮಾಣವಾಗುತ್ತಲೇ ಇವೆ’ ಎಂದು ಜೆ.ಪಿ. ನಗರದ ನಿವಾಸಿ ವಿ. ಶಶಿಕುಮಾರ್ ದೂರಿದರು.
‘ಜಯನಗರ 8ನೇ ಬ್ಲಾಕ್‌ನ 45ನೇ ಅಡ್ಡರಸ್ತೆಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಆರು ಅಂತಸ್ತಿನ ಕಟ್ಟಡವನ್ನು ಅಕ್ರಮವಾಗಿ ನಿರ್ಮಾಣ ಮಾಡಲಾಗುತ್ತಿದೆ. 41ನೇ ಅಡ್ಡರಸ್ತೆ ಹಾಗೂ 43ನೇ ಅಡ್ಡರಸ್ತೆಯಲ್ಲಿ ಯಾವುದೇ ರೀತಿಯ ಸೆಟ್‌ಬ್ಯಾಕ್ ಬಿಡದೆ ಕಟ್ಟಡ ನಿರ್ಮಾಣವಾಗುತ್ತಿದೆ. ವಾರ್ಡ್ ನಂ. 179ರಲ್ಲಿ ಸುಮಾರು 30 ಕಟ್ಟಡಗಳು ಅಕ್ರಮವಾಗಿ ನಿರ್ಮಾಣವಾಗುತ್ತಿವೆ. ಈ ಬಗ್ಗೆ ದೂರು ನೀಡಿದ್ದೇನೆ. ಆದರೆ ಯಾವ ಅಧಿಕಾರಿಯೂ ಕ್ರಮ ಕೈಗೊಂಡಿಲ್ಲ’ ಎಂದು ಶಶಿಕುಮಾರ್ ದೂರಿದರು.
ನಗರ ಯೋಜನೆ ಅಧಿಕಾರಿ ನಿರ್ಲಕ್ಷ್ಯ: ‘ಕಾನೂನು ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ’ ಎಂಬ ದೂರನ್ನು ಪರಿಗಣಿಸಿರುವ, ಬೆಂಗಳೂರು ದಕ್ಷಿಣ ವಲಯದ ಶಾಖಾಂಬರಿ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ದಕ್ಷಿಣ ವಲಯದ ನಗರ ಯೋಜನೆ ಸಹಾಯಕ ನಿರ್ದೇಶಕರಿಗೆ (ಎಡಿಟಿಪಿ) 2024ರ ಡಿಸೆಂಬರ್ 10ರಂದು ಪತ್ರ ಬರೆದಿದ್ದಾರೆ. 16 ಕಟ್ಟಡಗಳ ಸಂಖ್ಯೆಯನ್ನು ನಮೂದಿಸಿ, ಅವುಗಳ ಮೇಲೆ ಕೈಗೊಂಡಿರುವ ಕ್ರಮ, ಮಂಜೂರಾತಿ ನಕ್ಷೆ, ಕಟ್ಟಡ ನಿರ್ಮಾಣ ಪ್ರಾರಂಭಿಸಲು ನೀಡಿರುವ ಪ್ರಮಾಣ ಪತ್ರಗಳನ್ನು (ಸಿಸಿ) ಸಲ್ಲಿಸುವಂತೆ ಸೂಚಿಸಿದ್ದಾರೆ.
‘ಈ ಸೂಚನೆ ನೀಡಿ ಆರು ತಿಂಗಳಾದರೂ ಎಡಿಟಿಪಿ ಅವರು ಕ್ರಮ ಕೈಗೊಂಡಿಲ್ಲ. ಕಟ್ಟಡಗಳು ಅಕ್ರಮವಾಗಿ ನಿರ್ಮಾಣವಾಗುತ್ತಿವೆ’ ಎಂದು ಶಶಿಕುಮಾರ್ ಆರೋಪಿಸಿದರು.
ಪ್ರತಿಕ್ರಿಯಿಸದ ಬಿಬಿಎಂಪಿ ಅಧಿಕಾರಿಗಳು
ಜಯನಗರ 8ನೇ ಬ್ಲಾಕ್‌ನಲ್ಲಿ 15ಕ್ಕೂ ಹೆಚ್ಚು ಕಟ್ಟಡಗಳು ಕಾನೂನು ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಿಬಿಎಂಪಿ ದಕ್ಷಿಣ ವಲಯದ ಆಯುಕ್ತ ದಕ್ಷಿಣ ವಲಯದ ನಗರ ಯೋಜನೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಕರೆ ಹಾಗೂ ಸಂದೇಶಕ್ಕೆ ಅವರಿಬ್ಬರೂ ಪ್ರತಿಕ್ರಿಯಿಸಲಿಲ್ಲ.
ಎಇಇ ಪತ್ರದಲ್ಲಿರುವ ಕಟ್ಟಡಗಳು
37ನೇ ಎ ಅಡ್ಡರಸ್ತೆಯ ನಿವೇಶನ ಸಂಖ್ಯೆ 213
38ನೇ ಅಡ್ಡರಸ್ತೆಯ ನಂ. 27/ಬಿ ನಂ. 23/ಸಿ
41ನೇ ಅಡ್ಡರಸ್ತೆಯ ನಂ.331 ನಂ.69
42ನೇ ಅಡ್ಡರಸ್ತೆಯ ನಂ.101 ನಂ 363 ನಂ.361
43ನೇ ಅಡ್ಡರಸ್ತೆಯ ನಂ.407 ನಂ. 422 ನಂ. 139
44ನೇ ಅಡ್ಡರಸ್ತೆಯ ನಂ.172 ನಂ.174 ನಂ. 186 ನಂ.477
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.