ADVERTISEMENT

ಬದುಕಿನ ಪರೀಕ್ಷೆ ಎದುರಿಸಲು ಸಾಹಿತ್ಯವೇ ಸಾಧನ: ಜಯಂತ ಕಾಯ್ಕಿಣಿ

ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 14:13 IST
Last Updated 29 ಜುಲೈ 2025, 14:13 IST
   

ಬೆಂಗಳೂರು: ಹೊಸತಲೆಮಾರಿನ ವಿದ್ಯಾರ್ಥಿಗಳು ಬದುಕಿನ ಸವಾಲುಗಳಿಗೆ ಧೃತಿಗೆಡದೆ, ಅವುಗಳನ್ನು ಸಮರ್ಥವಾಗಿ ಎದುರಿಸಲು ಸಾಹಿತ್ಯವೇ ಪ್ರಮುಖ ಸಾಧನ. ಹಾಗಾಗಿ ಯುವಜನರು ಸಾಹಿತ್ಯಾಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಂಘ, ಕನ್ನಡ ವಿಭಾಗದ ಸಹಯೋಗದೊಂದಿಗೆ ಶೇಷಾದ್ರಿಪುರಂ ಕಾಲೇಜಿನಲ್ಲಿ ಆಯೋಜಿಸಿದ್ದ ‘ಅಂಗಳದಲ್ಲಿ ತಿಂಗಳ ಪುಸ್ತಕ’ ಕಾರ್ಯಕ್ರಮದಡಿ ವ್ಯಾಸರಾಯ ಬಲ್ಲಾಳರ ‘ಬಂಡಾಯ’ ಕೃತಿ ಕುರಿತು ಅವರು ಮಾತನಾಡಿದರು.

ವ್ಯಾಸರಾಯ ಬಲ್ಲಾಳರ ‘ಬಂಡಾಯ’ ಕೃತಿಯ ಅಂತರಂಗದ ಆಶಯವೂ ಬದುಕಿನ ನಾನಾ ಸ್ತರಗಳ ವ್ಯವಸ್ಥೆಯೊಂದಿಗೆ ಮನುಷ್ಯರು ಮುಖಾಮುಖಿಯಾಗುವುದೇ ಆಗಿದೆ. ವ್ಯಾಸರಾಯ ಬಲ್ಲಾಳರು ಕನ್ನಡ ಸಾಹಿತ್ಯ ಕಂಡ ಅಪರೂಪದ ಬರಹಗಾರ. ಮೃದು ಧೋರಣೆಯ, ಭಾವ ಪರವಶತೆಯ ಶೈಲಿಯ ಕಾದಂಬರಿಗಳಿಂದ ಗುರುತಿಸಿಕೊಂಡಿದ್ದ ಬಲ್ಲಾಳರು, ಕ್ರಾಂತಿಕಾರಕ ಮನಸ್ಥಿತಿಯ ಕಡೆಗೆ ಹೊರಳಿದ್ದು ಅವರ ಬಂಡಾಯ ಕಾದಂಬರಿಯ ವಿಶೇಷವಾಗಿದೆ ಎಂದು ತಿಳಿಸಿದರು.

ADVERTISEMENT

ಸಾಹಿತ್ಯದ ಶಕ್ತಿ ಮತ್ತು ಅದರ ಸೌಂದರ್ಯವನ್ನು ವಿದ್ಯಾರ್ಥಿಗಳು ಅನುಭವಿಸಬೇಕೆಂದರೆ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಓದು ರೂಢಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಮಾತನಾಡಿ, ‘ಪ್ರತಿ ವಿದ್ಯಾರ್ಥಿಯ ಹಸ್ತದಲ್ಲಿ ಪುಸ್ತಕವಿರಬೇಕು. ಪುಸ್ತಕ ಮಕ್ಕಳ ಮಸ್ತಕದಲ್ಲಿ ತುಂಬುವಂತಾಗಬೇಕು. ಆಗ ಮಾತ್ರ ಕನ್ನಡ ಸಾಹಿತ್ಯ ಮತ್ತು ಕನ್ನಡ ಪುಸ್ತಕೋದ್ಯಮವು ಬೆಳೆಯುತ್ತದೆ’ ಎಂದರು.

ಇಂದು ಮುದ್ರಣ ಮಾಧ್ಯಮ ಅತ್ಯಂತ ದೊಡ್ಡರೀತಿಯಲ್ಲಿ ಬೆಳೆದಿದೆ. ಜಗತ್ತಿನಾದ್ಯಂತ ಪ್ರಕಾಶನ ಸಂಸ್ಥೆಗಳು ಆಧುನಿಕ ಸಾಧ್ಯತೆಗಳನ್ನೆಲ್ಲಾ ಬಳಸಿಕೊಂಡು ಪುಸ್ತಕೋದ್ಯಮಕ್ಕೆ ಹೊಸ ಆಯಾಮವನ್ನು ತಂದಿವೆ ಎಂದು ನುಡಿದರು.

ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಜಯಂತ ಕಾಯ್ಕಿಣಿ ಅವರನ್ನು ಸನ್ಮಾನಿಸಲಾಯಿತು. ವ್ಯಾಸರಾಯ ಬಲ್ಲಾಳರ ಪುತ್ರಿ ಅಂಜಲಿ ಬಲ್ಲಾಳ, ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್, ಪ್ರಾಂಶುಪಾಲ ಮೇಜರ್ ಆನಂದಪ್ಪ ಐ., ಕನ್ನಡ ವಿಭಾಗದ ಮುಖ್ಯಸ್ಥೆ ಎಚ್.ಎಂ. ಗೀತಾ, ಕನ್ನಡ ಸಂಘದ ಸಂಚಾಲಕಿ ಎಂ.ಎನ್. ಅರ್ಚನಾ ತೇಜಸ್ವಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.