ಬೆಂಗಳೂರು: ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹೆಮ್ಮಿಗೆಪುರದಲ್ಲಿ ಮಣ್ಣು ಸುರಿಯುವ ವಿಚಾರಕ್ಕೆ ನಡೆದ ನಡೆದ ಗಲಾಟೆಯಲ್ಲಿ ಜೆ.ಸಿ.ಬಿ ಯಂತ್ರದ ಮಾಲೀಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಹೆಮ್ಮಿಗೆಪುರದ ಎಚ್.ಎಸ್.ಲಿಂಗಮೂರ್ತಿ ಕೊಲೆಯಾದ ವ್ಯಕ್ತಿ. ‘ಲಿಂಗಮೂರ್ತಿ ಅವರ ಸಹೋದರ ಗೋವಿಂದರಾಜು ಎಂಬುವವರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.
‘ಕೊಲೆ ಆರೋಪಿಗಳಾದ ಹೆಮ್ಮಿಗೆಪುರದ ನಿವಾಸಿ ಚಿರಂಜೀವಿ ಅಲಿಯಾಸ್ ಚಿರಿ ಹಾಗೂ ಆತನ ಇಬ್ಬರ ಸ್ನೇಹಿತರ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಗೋವಿಂದರಾಜು ಅವರ ಎರಡು ಲಾರಿ ಹೊಂದಿದ್ದು, ಮಣ್ಣನ್ನು ಹೆಮ್ಮಿಗೆಪುರ ಹಾಗೂ ಐರಾ ಸ್ಕೂಲ್ ಪಕ್ಕದ ಖಾಲಿ ಜಾಗದಲ್ಲಿ ಅನ್‌ಲೋಡ್ ಮಾಡುತ್ತಿದ್ದರು. ಲಿಂಗಮೂರ್ತಿ ಅವರು ಜೆ.ಸಿ.ಬಿ ಯಂತ್ರ ಹೊಂದಿದ್ದು, ಅನ್‌ಲೋಡ್ ಮಾಡಿದ ಮಣ್ಣನ್ನು ಸಮತಟ್ಟು ಮಾಡುವ ಕೆಲಸ ಮಾಡುತ್ತಿದ್ದರು. ಶನಿವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಲಿಂಗಮೂರ್ತಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಚಿರಂಜೀವಿ ಹಾಗೂ ಇತರೆ ಆರೋಪಿಗಳು ಬಂದಿದ್ದರು. ಅಲ್ಲಿ ನಡೆದ ನಡೆದ ಗಲಾಟೆಯಲ್ಲಿ ಚಾಕುವಿನಿಂದ ಇರಿದು ಆರೋಪಿಗಳು ಪರಾರಿ ಆಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಗೋವಿಂದರಾಜು ಅವರ ಸ್ನೇಹಿತ ಮಂಜು, ಬಿಜಿಎಸ್ ಆಸ್ಪತ್ರೆಗೆ ಸೇರಿದ್ದರು. ಅಲ್ಲಿ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.