ADVERTISEMENT

ಮೇಲ್ಸೇತುವೆಗೆ ಸಾವರ್ಕರ್‌ ಹೆಸರು: ಕಾಂಗ್ರೆಸ್‌, ಜೆಡಿಎಸ್‌ ವಿರೋಧ

ಕೊನೆ ಕ್ಷಣದಲ್ಲಿ ಕಾರ್ಯಕ್ರಮ ಮುಂದೂಡಿದ ಪಾಲಿಕೆ

​ಪ್ರಜಾವಾಣಿ ವಾರ್ತೆ
Published 28 ಮೇ 2020, 10:43 IST
Last Updated 28 ಮೇ 2020, 10:43 IST
ವಿನಾಯಕ ದಾಮೋದರ ಸಾವರ್ಕರ್
ವಿನಾಯಕ ದಾಮೋದರ ಸಾವರ್ಕರ್   

ಬೆಂಗಳೂರು: ಯಲಹಂಕದ ‘ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್’‌ ರಸ್ತೆಯ ಮೇಲ್ಸೇತುವೆಗೆ ‘ವಿನಾಯಕ ದಾಮೋದರ ಸಾವರ್ಕರ್‌’ ಹೆಸರು ನಾಮಕರಣ ಮಾಡುವ ಬಿಬಿಎಂಪಿ ತೀರ್ಮಾನಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ವಿರೋಧ ವ್ಯಕ್ತಪಡಿಸಿವೆ.

ಈ ಸಂಬಂಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಚಿವ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

‘ಯಾವುದೇ ಕಾರಣಕ್ಕೂ ಹೆಸರು ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದು ಯಲಹಂಕ ಶಾಸಕ ಎಸ್‌.ಆರ್.ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ. ’ಮೇಲ್ಸೇತುವೆಗೆ ಸಾವರ್ಕರ್‌ ಹೆಸರನ್ನು ಇಡಲು ಪಾಲಿಕೆ ಒಪ್ಪಿದೆ. ಈಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ ರಾಜಕೀಯ ಕಾರಣಗಳಿಗಾಗಿ ವಿರೋಧ ಮಾಡುವುದು ಸರಿಯಲ್ಲ‘ ಎಂದು ಅವರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಈ ವಿಷಯದ ಕುರಿತು ಪರ ವಿರೋಧ ಚರ್ಚೆಗೆ ಕಾರಣವಾಗಿದೆ.

ADVERTISEMENT

ಈ ಸೇತುವೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ ಎಂದು ಪಾಲಿಕೆಯ ಆಹ್ವಾನಪತ್ರದಲ್ಲಿ ತಿಳಿಸಲಾಗಿತ್ತು. ಆದರೆ, ಆಹ್ವಾನ ಪತ್ರಿಕೆಯಲ್ಲಿ ‘ಮೇಲು ಸೇತುವೆ ಉದ್ಘಾಟನೆ’ ಎಂದು ಮಾತ್ರ ನಮೂದಿಸಿದ್ದು, ಅದರಲ್ಲಿ ಸಾವರ್ಕರ್‌ ಹೆಸರು ಇಲ್ಲ.

ಮೇಲು ಸೇತುವೆಗೆ ‘ವೀರ ಸಾವರ್ಕರ್’‌ ಎಂಬ ಹೆಸರು ಇಡಲಾಗುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.

ಕೋವಿಡ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದು, ಹೆಚ್ಚಿನ ಜನ ಸೇರುವ ಸಾಧ್ಯತೆ ಇರುವುದರಿಂದ ಕಾರ್ಯಕ್ರಮ ಮುಂದೂಡಲಾಗಿದೆ. ಮುಂದಿನ ದಿನಾಂಕ ತಿಳಿಸಲಾಗುವುದು ಎಂದು ಪಾಲಿಕೆ ಬುಧವಾರ ರಾತ್ರಿ ಪ್ರಕಟಿಸಿದೆ.

ಸಾವರ್ಕರ್‌ ನಾಮಕರಣದಲ್ಲಿ ತಪ್ಪೇನಿದೆ: ಆರ್.ಅಶೋಕ್ ಪ್ರಶ್ನೆ

‘ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ವೀರಸಾವರ್ಕರ್‌ ಹೆಸರು ಇಟ್ಟಿರುವುದರಲ್ಲಿ ಯಾವುದೇ ತಪ್ಪಿಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಬೆದರಿಕೆಗಳಿಗೆ ಬಿಜೆಪಿ ಬಗ್ಗುವುದಿಲ್ಲ’ ಎಂದು ಕಂದಾಯ ಸಚಿವ ಆರ್‌. ಅಶೋಕ ತಿರುಗೇಟು ನೀಡಿದರು.

‘ಸಾವರ್ಕರ್‌ ಹೆಸರಲ್ಲೇ ವೀರ ಎಂಬ ವಿಶೇಷಣವಿದೆ. ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಜೈಲು ಶಿಕ್ಷೆ ಅನುಭವಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತರಲು ಶ್ರಮಿಸಿದ್ದಾರೆ. ಮಹಾತ್ಮ ಗಾಂಧೀಜಿ, ಬಿ.ಆರ್.ಅಂಬೇಡ್ಕರ್‌ ಅವರ ಹೆಸರನ್ನು ಹಲವು ಕಡೆ ಇಡಲಾಗಿದೆ. ಸಾವರ್ಕರ್‌ ಹೆಸರು ಇಡುವುದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

‘ಹಿಂದುತ್ವ ಪ್ರತಿಪಾದನೆ ಮಾಡಿದ ಕಾರಣಕ್ಕೆ ಸಾವರ್ಕರ್‌ ಅವರನ್ನು ಕಾಂಗ್ರೆಸ್‌ ವಿರೋಧಿಸುತ್ತಿದೆ. ನಕಲಿ ಗಾಂಧಿ ಕುಟುಂಬದ ವಂಶಪಾರಂಪರ್ಯ ರಾಜಕಾರಣದ ಮನಃಸ್ಥಿತಿಯಿಂದ ಕಾಂಗ್ರೆಸ್‌ ನಾಯಕರು ಹೊರಬರುವ ಅಗತ್ಯವಿದೆ. ಸ್ವಾತಂತ್ರ್ಯ ಚಳವಳಿಗೆ ಹೋರಾಡಿದವರಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳಬೇಕಿದೆ’ ಎಂದು ಅವರು ಕುಟುಕಿದರು.

'ಸೂತ್ರಧಾರರ ಆಡಳಿತ'

ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನು ಇಡಲು ಹೊರಡುವ ಮೂಲಕ ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರಿಗೆ ರಾಜ್ಯ ಸರ್ಕಾರ ಅಪಮಾನ ಮಾಡಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ತೆರೆಯ ಹಿಂದಿನ ಸೂತ್ರಧಾರರೇ ಹೊರತು, ಚುನಾಯಿತ ಸರ್ಕಾರ ಅಲ್ಲ ಎಂಬುದಕ್ಕೆ ಇದು ನಿದರ್ಶನ ಎಂದುವಿರೋಧ ಪಕ್ಷದ ನಾಯಕಸಿದ್ದರಾಮಯ್ಯ ಹೇಳಿದರು.

'ಹೋರಾಟಗಾರರಿಗೆ ಅವಮಾನ'

ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ನಾಮಕರಣ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ನಾಡಿನ ಅಭ್ಯುದಯಕ್ಕಾಗಿ ಹೋರಾಟ ಮಾಡಿದವರಿಗೆ ಮಾಡುತ್ತಿರುವ ಅಪಮಾನ. ಇದು ರಾಜ್ಯ ಸರ್ಕಾರಕ್ಕೆ ಶೋಭೆ ತರದು ಎಂದುಜೆಡಿಎಸ್‌ ಶಾಸಕಾಂಕ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು.

'ಹಿಂದೆ ಮಣ್ಣಿನ ಮಕ್ಕಳ ನೆನಪು ಬರಲಿಲ್ಲವೇ'

ಜವಾಹರಲಾಲ್‌ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ಸಂಜಯ್‌ ಗಾಂಧಿ ಅವರ ಹೆಸರುಗಳಲ್ಲಿ ಕಾಲೇಜುಗಳು, ಬಡಾವಣೆಗಳು, ಆಸ್ಪತ್ರೆಗಳು ಮತ್ತು ಕ್ಯಾಂಟೀನ್‌ಗಳಿಗೆ ನಾಮಕರಣ ಮಾಡುವಾಗ ನಿಮಗೆ ಮಣ್ಣಿನ ಮಕ್ಕಳ ನೆನಪು ಬರಲಿಲ್ಲವೇ. ಅಪ್ಪಟ ದೇಶಭಕ್ತ ವೀರ ಸಾವರ್ಕರ್ ಹೆಸರಿನಲ್ಲಿ ಒಂದು ಸೇತುವೆಯ ನಾಮಕರಣ ಮಾಡುವುದು ನಿಮಗೆ ಸಹಿಸಲು ಆಗುತ್ತಿಲ್ಲವೇ ಎಂದುಕನ್ನಡ ಮತ್ತು ಸಂಸ್ಕೃತಿ ಸಚಿವಸಿ.ಟಿ.ರವಿ ಹೇಳಿದರು.

'ಕಾಂಗ್ರೆಸ್‌ಗೆ ಸಂಕಟ ಯಾಕೆ'

ದೇಶದಲ್ಲಿ 450 ಕ್ಕೂ ಹೆಚ್ಚು ಯೋಜನೆಗಳು, ಪ್ರಶಸ್ತಿಗಳು, ಸಂಸ್ಥೆಗಳಿಗೆ ನೆಹರು ಕುಟುಂಬದ ಸದಸ್ಯರುಗಳ ಹೆಸರುಗಳನ್ನೇ ಇಡಲಾಗಿದೆ. ದೇಶ ಭಕ್ತ ಸಾವರ್ಕರ್‌ ಹೆಸರಿಟ್ಟರೆ ಕಾಂಗ್ರೆಸ್‌ಗೆ ಸಂಕಟ ಏಕೆ? ಮೇಲ್ಸೇತುವೆಗೆ ರಾಬರ್ಟ್‌ ವಾದ್ರಾ ಹೆಸರಿಟ್ಟರೆ ಸಿದ್ದರಾಮಯ್ಯ ಅವರಿಗೆ ಖುಷಿ ಆಗಬಹುದು. ಗುಲಾಮಗಿರಿಯನ್ನು ಬಿಡಲಿ ಎಂದು ಬಿಜೆಪಿ ನಾಯಕಗೋ.ಮಧುಸೂದನ್ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.