ADVERTISEMENT

ನಟಿ, ನೃತ್ಯಗಾರ್ತಿ ರುಕ್ಮಿಣಿ ಕಾರಿನಲ್ಲಿದ್ದ ಆಭರಣ ಕದ್ದಿದ್ದ ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 17 ಮೇ 2025, 0:20 IST
Last Updated 17 ಮೇ 2025, 0:20 IST
<div class="paragraphs"><p>ರುಕ್ಮಿಣಿ ವಿಜಯಕುಮಾರ್‌</p></div>

ರುಕ್ಮಿಣಿ ವಿಜಯಕುಮಾರ್‌

   

ಬೆಂಗಳೂರು: ನಟಿ, ನೃತ್ಯಗಾರ್ತಿ ರುಕ್ಮಿಣಿ ವಿಜಯ್‌ಕುಮಾರ್ ಅವರ ಕಾರಿನಲ್ಲಿದ್ದ ವಜ್ರದ ಉಂಗುರ ಸೇರಿ ಸುಮಾರು ₹22.50 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಕಬ್ಬನ್‌ಪಾರ್ಕ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್‌ನ ನಿವಾಸಿ ರಾಜ್‌ ಮಹಮ್ಮದ್‌ ಮಸ್ತಾನ್‌ (45) ಬಂಧಿತ ಆರೋಪಿ. ಈತ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆರೋಪಿಯಿಂದ ₹22.50 ಲಕ್ಷ ಮೌಲ್ಯದ ಆಭರಣಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ರುಕ್ಮಿಣಿ ಅವರು ‘ಭಜರಂಗಿ’ ಸಿನಿಮಾದಲ್ಲಿ ನಟಿಸಿದ್ದರು. ಕೋರಮಂಗಲದಲ್ಲಿ ನೆಲಸಿದ್ದರು.

‘ದೂರುದಾರರು ಮೇ 11ರಂದು ಬೆಳಿಗ್ಗೆ 8ರ ಸುಮಾರಿಗೆ ಕಬ್ಬನ್‌ಪಾರ್ಕ್‌ನಲ್ಲಿ ವಾಯುವಿಹಾರಕ್ಕೆಂದು ಹೋಗಿದ್ದಾಗ ಘಟನೆ ನಡೆದಿದೆ. ಕಾರನ್ನು ಪಾರ್ಕ್‌ ಮಾಡಿದ್ದ ಅವರು, ಮರಳಿ ಹೋಗಿ ನೋಡಿದಾಗ ಡಿಕ್ಕಿಯಲ್ಲಿದ್ದ ಬ್ಯಾಗ್‌ ಇರಲಿಲ್ಲ. ವ್ರಜದ ಆಭರಣಗಳು ಕಳ್ಳತನ ಆಗಿರುವುದು ಗೊತ್ತಾಗಿ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.

‘ಮಹಾಲಕ್ಷ್ಮಿ ಲೇಔಟ್‌ನಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

ನಟಿ ಕಾರಿನ ಲಾಕ್‌ ಮಾಡುವುದನ್ನು ಮರೆತಿದ್ದರು. ಅದನ್ನು ಗಮನಿಸಿದ್ದ ಆರೋಪಿ ಕಾರಿನ ಬಳಿ ಹೋಗಿ ಬಾಗಿಲು ತೆಗೆದು ಡಿಕ್ಕಿಯಲ್ಲಿಟ್ಟಿದ್ದ ₹14 ಲಕ್ಷ ಮೌಲ್ಯದ 2 ವಜ್ರದ ಉಂಗುರಗಳು, ₹9 ಲಕ್ಷ ಬೆಲೆಯ ವಾಚ್, ₹75 ಸಾವಿರ ಬೆಲೆಯ ವಾಲೆಟ್‌ ಸೇರಿ ₹22.50 ಲಕ್ಷ ಮೌಲ್ಯದ ವಸ್ತುಗಳನ್ನು ಕದ್ದಿದ್ದ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

ಆರೋಪಿಯಿಂದ ಜಪ್ತಿ ಮಾಡಿಕೊಂಡ ವಜ್ರಾಭರಣ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.