ADVERTISEMENT

ಕಳ್ಳತನ ಆರೋಪಿಯಿಂದ ₹2.50 ಕೋಟಿ ಮೌಲ್ಯದ ಆಭರಣ ಜಪ್ತಿ

ಜಯನಗರ ಠಾಣಾ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 16:15 IST
Last Updated 8 ಜುಲೈ 2025, 16:15 IST
ಮನೀಶ್‌ 
ಮನೀಶ್‌    

ಬೆಂಗಳೂರು: ಚಿನ್ನಾಭರಣ ಅಂಗಡಿ ಮಾಲೀಕರು ನೀಡಿದ್ದ ಚಿನ್ನದಗಟ್ಟಿಯನ್ನು ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ಮನೀಶ್ ಕುಮಾರ್ ಸೋನಿ(40) ಬಂಧಿತ ಆರೋಪಿ.

ಆರೋಪಿಯಿಂದ ₹ 2.50 ಕೋಟಿ ಮೌಲ್ಯದ 3 ಕೆ.ಜಿ. 166 ಗ್ರಾಂ ತೂಕದ ಚಿನ್ನದ ಗಟ್ಟಿ ಮತ್ತು ₹ 8.53 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್‌ ಸೀಮಂತ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.

ADVERTISEMENT

‘ಅಕ್ಕಸಾಲಿಗನಾಗಿ ಕೆಲಸ ಮಾಡುತ್ತಿದ್ದ ಮನೀಶ್ ಕುಮಾರ್ ಸೋನಿ ಹನುಮಂತನಗರದಲ್ಲಿ ವಾಸವಾಗಿದ್ದ. ನಾಲ್ಕು ವರ್ಷಗಳಿಂದ ಜಯನಗರ ಮೂರನೇ ಬ್ಲಾಕ್‌ನ ಚಿನ್ನಾಭರಣ ಅಂಗಡಿಯಿಂದ ಚಿನ್ನದಗಟ್ಟಿ ಪಡೆದು, ವಿವಿಧ ಶೈಲಿಯ ಚಿನ್ನಾಭರಣ ತಯಾರಿಸಿಕೊಡುತ್ತಿದ್ದ. ಏಪ್ರಿಲ್‌ನಿಂದ ಜೂನ್‌ವರೆಗೆ ಪಡೆದುಕೊಂಡಿದ್ದ 8 ಕೆ.ಜಿ 351 ಗ್ರಾಂ ಚಿನ್ನದ ಗಟ್ಟಿಯಲ್ಲಿ ಆಭರಣವನ್ನೂ ತಯಾರಿಸಿಕೊಡದೆ, ಸಂಪರ್ಕಕ್ಕೂ ಸಿಗದೆ ಪರಾರಿಯಾಗಿದ್ದ. ಈ ಸಂಬಂಧ ಆರೋಪಿಯ ವಿರುದ್ಧ ದೂರು ನೀಡಲಾಗಿತ್ತು. ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಹೇಳಿದರು.

ಗೋವಾದಲ್ಲಿ ಬಂಧನ: ಆರೋಪಿ ಗೋವಾಕ್ಕೆ ಪರಾರಿ ಆಗಿರುವ ಮಾಹಿತಿ ಸಿಕ್ಕಿತ್ತು. ಖಚಿತ ಮಾಹಿತಿ ಆಧರಿಸಿ ಅಲ್ಲಿಗೆ ತೆರಳಿದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಿದೆ.

ಆರೋಪಿ ಜೀವನ ನಿರ್ವಹಣೆ ಹಾಗೂ ಇತರೆ ಅಗತ್ಯಗಳಿಗೆ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಆ ಸಾಲ ತೀರಿಸಲು ಸಾಧ್ಯವಾಗದೆ ಚಿನ್ನದಗಟ್ಟಿ ಕಳ್ಳತನ ಮಾಡಿದ್ದ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.