ADVERTISEMENT

ಚಿನ್ನಾಭರಣ, ನಗದು ಕಳವು ಪ್ರಕರಣ: ಆತ್ಮಹತ್ಯೆ ಮಾಡಿಕೊಂಡವನೇ ಆರೋಪಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2023, 21:54 IST
Last Updated 4 ಸೆಪ್ಟೆಂಬರ್ 2023, 21:54 IST
<div class="paragraphs"><p>‍ಪ್ರಾತಿನಿಧಿಕ ಚಿತ್ರ</p></div>

‍ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಉದ್ಯಮಿ ಗಿರಿಜಾ ಎಂಬುವವರ ಮನೆಯಲ್ಲಿ ಇತ್ತೀಚೆಗೆ ನಡೆದಿದ್ದ ಚಿನ್ನಾಭರಣ ಹಾಗೂ ನಗದು ಕಳವು ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪುಲಕೇಶಿನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ತಮ್ಮ ಮೇಲೆ ಆರೋಪ ಕೇಳಿಬಂದಿದ್ದಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದ ಕಾರು ಚಾಲಕ ಜಿಮೋನ್‌ ವರ್ಗೀಸ್‌ ಅವರೇ ಆರೋಪಿ ಎಂಬುದು ಪೊಲೀಸ್‌ ತನಿಖೆಯಿಂದ ಗೊತ್ತಾಗಿದೆ.

ADVERTISEMENT

‘ಠಾಣಾ ವ್ಯಾಪ್ತಿಯ ಗಿರಿಜಾ ಅವರ ಮನೆಯಲ್ಲಿ ₹ 2.50 ಕೋಟಿ ಮೊತ್ತದ ಚಿನ್ನಾಭರಣ, ನಗದು ಹಾಗೂ ವಿದೇಶಿ ಕರೆನ್ಸಿಯ ಕಳವು ನಡೆದಿತ್ತು. ಮನೆಯ ಮಾಲೀಕರು, ಕಾರು ಚಾಲಕ ಸೇರಿದಂತೆ ಕೆಲವರ ವಿರುದ್ಧ ಆಗಸ್ಟ್‌ 13ರಂದು ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಚಾಲಕನಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದರು. ಮಾಲೀಕರು ನನ್ನ ಮೇಲೆ ಸುಳ್ಳು ದೂರು ನೀಡಿ ಅವಮಾನಿಸಿದ್ದಾರೆ ಎಂದು ಮಲಯಾಳಂ ಭಾಷೆಯಲ್ಲಿ ಡೆತ್‌ನೋಡು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ’ ಎಂದು ಎಂದು ಪೊಲೀಸರು ಹೇಳಿದರು.

‘ಕಳವು ನಡೆದಿದ್ದ ಮನೆಯಲ್ಲಿ ಪರಿಶೀಲನೆ ನಡೆಸುವಾಗ ಕೆಲವು ಸಾಕ್ಷ್ಯಗಳು ಲಭಿಸಿದ್ದವು. ಅದನ್ನು ಆಧರಿಸಿ ಚಾಲಕನನ್ನು ವಶಕ್ಕೆ ಪಡೆದುಕೊಳ್ಳುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಯಿತು. ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು’ ಎಂದು ತಿಳಿಸಿದರು.

‘ವಿಶೇಷ ಪೊಲೀಸ್‌ ತಂಡವು ಕೇರಳದಲ್ಲಿದ್ದ ಆರೋಪಿಯ ಪತ್ನಿ ಮನೆಗೆ ತೆರಳಿ ವಿಚಾರಣೆ ನಡೆಸಿದಾಗ ಪತಿಯೇ ಮನೆಗೆ ಬಂದು ಚಿನ್ನಾಭರಣ ಹಾಗೂ ನಗದು ಕೊಟ್ಟು ಹೋಗಿರುವುದಾಗಿ ಹೇಳಿಕೆ ನೀಡಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಸದ್ಯ ₹1.50 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ. ಉಳಿದ ಆಭರಣಗಳನ್ನು ಕೇರಳ ಬ್ಯಾಂಕ್‌ನಲ್ಲಿ ಅಡಮಾನ ಇಡಲಾಗಿತ್ತು. ಅದನ್ನು ವಶಕ್ಕೆ ಪಡೆದುಕೊಳ್ಳುವ ಪ್ರಕ್ರಿಯೆಗಳು ನಡೆಯುತ್ತಿವೆ. ವಿದೇಶಿ ಕರೆನ್ಸಿ ಸಹ ಪತ್ತೆಯಾಗಿದ್ದು ಅದನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.