ADVERTISEMENT

ದುಬಾರಿ ಬಡ್ಡಿ ವಸೂಲಿ ಪ್ರಕರಣದ ಆರೋಪಿ ಶೆಟ್ಟಿ ಮನೆಯಲ್ಲಿ ಜಿಂಕೆ ಕೊಂಬು

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 19:18 IST
Last Updated 9 ಜನವರಿ 2019, 19:18 IST
ಉದಯ್ ಶೆಟ್ಟಿ
ಉದಯ್ ಶೆಟ್ಟಿ   

ಬೆಂಗಳೂರು: ದುಬಾರಿ ಬಡ್ಡಿ ವಸೂಲಿ ಪ್ರಕರಣದಲ್ಲಿ ಸಿಸಿಬಿ ಬಲೆಗೆ ಬಿದ್ದಿರುವ ಫೈನಾನ್ಶಿಯರ್ ಉದಯ್ ಶೆಟ್ಟಿ ಮನೆಯಲ್ಲಿ ಜಿಂಕೆ ಕೊಂಬು ಪತ್ತೆಯಾಗಿದೆ.

ಸೋಮವಾರ ಶೆಟ್ಟಿಯನ್ನು ಬಂಧಿಸಿದ್ದ ‍‍ಪೊಲೀಸರು, ವಿಲ್ಸನ್‌ ಗಾರ್ಡನ್‌ನಲ್ಲಿರುವ ಆತನ ಮನೆ ಹಾಗೂ ಕಚೇರಿಗಳನ್ನು ಶೋಧಿಸಿದ್ದರು. ಈ ವೇಳೆ ₹ 5.76 ಲಕ್ಷ ನಗದು, ಪಿಸ್ತೂಲ್, ನಾಲ್ಕು ಜೀವಂತ ಗುಂಡುಗಳು, ಜಿಂಕೆ ಕೊಂಬು ಹಾಗೂ ಖಾಲಿ ಚೆಕ್‌ಗಳು ಸಿಕ್ಕಿವೆ.

‘ಶ್ರೀಹರಿ ಎಂಟರ್‌ಪ್ರೈಸಸ್’ ಹಾಗೂ ‘ಮುನೇಶ್ವರ ಸೌಹರ್ದ ಸೊಸೈಟಿ’ ಹೆಸರಿನಲ್ಲಿ ಹಣಕಾಸು ಸಂಸ್ಥೆಗಳನ್ನು ನಡೆಸುತ್ತಿದ್ದ ಶೆಟ್ಟಿ, ಸಾರ್ವಜನಿಕರಿಂದ ದುಬಾರಿ ಬಡ್ಡಿ ಪಡೆಯುತ್ತಿದ್ದ. ಸಕಾಲಕ್ಕೆ ಬಡ್ಡಿ ಕೊಡದಿದ್ದರೆ ಜೀವ ಬೆದರಿಕೆ ಹಾಕುತ್ತಿದ್ದ. ಈ ಸಂಬಂಧ ಅಬ್ದುಲ್ ರೆಹಮಾನ್ ಕಲಂದರ್ ಎಂಬುವರು ಸಂಜಯನಗರ ಠಾಣೆಗೆ ದೂರು ಕೊಟ್ಟಿದ್ದರು. ಕಮಿನಷರ್ ಟಿ.ಸುನೀಲ್ ಕುಮಾರ್ ಪ್ರಕರಣವನ್ನು ಸಿಸಿಬಿಗೆ‌ ವರ್ಗಾಯಿಸಿದ್ದರು.

ADVERTISEMENT

‘ಪೂರ್ವಜರ ಕಾಲದಿಂದಲೂ ಜಿಂಕೆ ಕೊಂಬು ತಮ್ಮ ಮನೆಯಲ್ಲಿರುವುದಾಗಿ ಶೆಟ್ಟಿ ಹೇಳಿಕೆ ಕೊಟ್ಟಿದ್ದಾನೆ. ಈ ಸಂಬಂಧ ಅರಣ್ಯ ಇಲಾಖೆಗೆ ವರದಿ ಕೊಟ್ಟಿದ್ದೇವೆ. ಅವರು ಪ್ರತ್ಯೇಕ ತನಿಖೆ ನಡೆಸಲಿದ್ದಾರೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.