ADVERTISEMENT

ಸರಗಳ್ಳನ ಥಳಿಸಿದವರ ವಿರುದ್ಧವೇ ಎಫ್‌ಐಆರ್

ಸಿಕ್ಕಿಬಿದ್ದು ಧರ್ಮದೇಟು ತಿಂದ ಆರೋಪಿಯಿಂದ ದೂರು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 19:54 IST
Last Updated 23 ಸೆಪ್ಟೆಂಬರ್ 2019, 19:54 IST
   

ಬೆಂಗಳೂರು: ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ವೇಳೆ ಸಿಕ್ಕಿಬಿದ್ದು ಧರ್ಮದೇಟು ತಿಂದಿದ್ದ ಆರೋಪಿಯೇ ಸಾರ್ವಜನಿಕರ ವಿರುದ್ಧ ದೂರು ನೀಡಿರುವ ಪ್ರಕರಣ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದೆ.

‘ಮಹಿಳೆಯೊಬ್ಬರ ಸರಗಳವು ಮಾಡಿದ್ದ ಆರೋಪದಡಿ ಶ್ರೀರಂಗಪಟ್ಟಣ ತಾಲ್ಲೂಕಿನ ಹಲಗೂರಿನ ಮಂಜುನಾಥ್ ಎಂಬಾತನನ್ನು ಬಂಧಿಸಲಾಗಿದೆ. ಆತನನ್ನು ಮನಬಂದಂತೆ ಥಳಿಸಿದ್ದ ಆರೋಪದಡಿ ಸುಮಾರು 50 ಸಾರ್ವಜನಿಕರ ವಿರುದ್ಧವೂ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಅಪರಾಧ ಎಸಗಿದವರಿಗೆ ಶಿಕ್ಷೆ ಕೊಡಲು ಕಾನೂನು ಇದೆ. ಈ ಪ್ರಕರಣದಲ್ಲಿ ಸಾರ್ವಜನಿಕರು ಕಾನೂನು ಕೈಗೆತ್ತಿಕೊಂಡಿದ್ದಾರೆ. ಪ್ರಾಣಕ್ಕೆ ಕುತ್ತು ತರುವ ರೀತಿಯಲ್ಲಿ ಆರೋಪಿಗೆ ಹೊಡೆದಿದ್ದಾರೆ. ಆರೋಪಿ ಜೊತೆಗೆ ಸಾರ್ವಜನಿಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ಆಗಿದ್ದೇನು: ‘ಕಾರು ಖರೀದಿಸಲು ₹ 3 ಲಕ್ಷ ಸಾಲ ಮಾಡಿದ್ದ ಮಂಜುನಾಥ್, ಅದನ್ನು ತೀರಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಸರಗಳವು ಮಾಡಿ ಅದರಿಂದ ಬಂದ ಹಣದಲ್ಲೇ ಸಾಲ ತೀರಿಸಲು ಸಂಚು ರೂಪಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಕಲ್ಯಾಣ್ ಕೋ ಆಪರೇಟಿವ್ ಸೊಸೈಟಿ ಬಳಿ ಇದೇ 20ರಂದು ಸಂಜೆ ಬಂದಿದ್ದ ಆರೋಪಿ, ಮಗು ಎತ್ತಿಕೊಂಡು ರಸ್ತೆಯಲ್ಲಿ ಹೊರಟಿದ್ದ ಮಹಿಳೆಯ ಚಿನ್ನದ ಸರ ಕಿತ್ತುಕೊಂಡಿದ್ದ. ಪರಾರಿಯಾಗಲು ಯತ್ನಿಸಿದ್ದ ಆತನನ್ನು ಸ್ಥಳದಲ್ಲಿದ್ದ ಆಟೊ ಚಾಲಕರು, ಬೈಕ್ ಸವಾರರು ಹಾಗೂ ಸಾರ್ವಜನಿಕರು ಹಿಡಿದುಕೊಂಡಿದ್ದರು. ಕೈ ಹಾಗೂ ದೊಣ್ಣೆಯಿಂದ ಆತನನ್ನು ಥಳಿಸಿದ್ದರು’ ಎಂದರು.

‘ಸ್ಥಳಕ್ಕೆ ಹೋಗಿದ್ದ ಪೊಲೀಸರು, ತೀವ್ರ ಗಾಯಗೊಂಡಿದ್ದ ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ನಂತರ ಆತನನ್ನು ಬಂಧಿಸಲಾಗಿದೆ. ಆತನ ಹೇಳಿಕೆ ಆಧರಿಸಿಯೇ ಸಾರ್ವಜನಿಕರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.‌

ಕಳ್ಳನನ್ನು ಹಿಡಿಡಿದ್ದು ತಪ್ಪಾ?

‘ಕೈಯಲ್ಲಿ ಮಗು ಇದ್ದಾಗಲೇ ಮಹಿಳೆಯ ಕತ್ತಿಗೆ ಆರೋಪಿ ಕೈ ಹಾಕಿದ್ದ. ಆಕಸ್ಮಾತ್ ಮಹಿಳೆ ಬಿದ್ದಿದ್ದರೇ ಮಗುವಿನ ಜೀವಕ್ಕೂ ಆಪತ್ತು ಬರುತ್ತಿತ್ತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

‘ಕಳ್ಳ ಕಳ್ಳ ಎಂದು ಮಹಿಳೆ ಚೀರಾಡಿದ್ದರಿಂದಲೇ ಎಲ್ಲರೂ ಸಹಾಯಕ್ಕೆ ಹೋಗಿ ಕಳ್ಳನನ್ನು ಹಿಡಿದರು. ಈ ಪ್ರಕರಣದಲ್ಲಿ ಜನರ ಮೇಲೆಯೇ ಪ್ರಕರಣ ದಾಖಲಿಸಿದ್ದು ಯಾವ ನ್ಯಾಯ. ಪೊಲೀಸರ ಇಂಥ ವರ್ತನೆಯಿಂದ ಯಾರೊಬ್ಬರೂ ಸಹಾಯಕ್ಕೆ ಹೋಗದ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.