ADVERTISEMENT

ವರದಿ ಕೇಳಿದ ನಗರಾಭಿವೃದ್ಧಿ ಇಲಾಖೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 19:47 IST
Last Updated 5 ಆಗಸ್ಟ್ 2019, 19:47 IST

ಬೆಂಗಳೂರು: ಪಾಲಿಕೆಯು ಯಾವುದೇ ಕಾಮಗಾರಿಗಳಿಗೆ ಮುಂದಿನ ಆದೇಶದವರೆಗೆ ಜಾಬ್‌ ಕೋಡ್‌ ನೀಡಬಾರದು ಹಾಗೂ ಹೊಸ ಕಾಮಗಾರಿಗೆ ಟೆಂಡರ್‌ ಕರೆಯಬಾರದು ಎಂದು ನಗರಾಭಿವೃದ್ಧಿ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳ ವಸ್ತು ಸ್ಥಿತಿ ಏನಿದೆ ಎಂಬ ಬಗ್ಗೆ ವಿವರವಾದ ವರದಿ ಸಲ್ಲಿಸಬೇಕು ಎಂದೂ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್. ಅನಿಲ್‌ ಕುಮಾರ್‌ ಬಿಬಿಎಂಪಿಗೆ ಸೂಚನೆ ನೀಡಿದ್ದಾರೆ.

ನಗರಾಭಿವೃದ್ಧಿ ಇಲಾಖೆಯು ಮುಖ್ಯಮಂತ್ರಿ ನವಬೆಂಗಳೂರು ಯೋಜನೆ ಅಡಿಯಲ್ಲಿ 2018–19, 2019–20, ಹಾಗೂ 2020–21ನೇ ಸಾಲಿನಲ್ಲಿ ಅನುಷ್ಠಾನಗೊಳಿಸುವ ಕಾಮಗಾರಿಗಳ ಕ್ರಿಯಾಯೋಜನೆಗಳಿಗೆ ನಗರಾಭಿವೃದ್ಧಿ ಇಲಾಖೆ ಈ ಹಿಂದೆ ಅನುಮೋದನೆ ನೀಡಿತ್ತು. 2018–19ನೇ ಸಾಲಿಗೆ ಈ ಯೋಜನೆ ಅಡಿ ₹8015.37 ಕೋಟಿ ಅನುದಾನ ಮಂಜೂರಾಗಿತ್ತು. ಇವುಗಳಲ್ಲಿ ಶೇ 50ಕ್ಕೂ ಹೆಚ್ಚು ಕಾಮಗಾರಿಗಳಿಗೆ ಈಗಾಗಲೇ ಜಾಬ್‌ ಕೋಡ್‌ ನೀಡಲಾಗಿದೆ.

ADVERTISEMENT

ಬಜೆಟ್‌ ಅನುಷ್ಠಾನ ನಿಲ್ಲಿಸಿ: ಬಿಬಿಎಂಪಿಯ 2018–19ನೇ ಸಾಲಿನ ಪರಿಷ್ಕೃತ ಬಜೆಟ್‌ ಹಾಗೂ 2019–20ನೇ ಸಾಲಿನ ಬಜೆಟ್‌ನ ಕಾರ್ಯಕ್ರಮಗಳ ಅನುಷ್ಠಾನವನ್ನು ತಕ್ಷಣವೇ ನಿಲ್ಲಿಸುವಂತೆಯೂ ನಗರಾಭಿವೃದ್ಧಿ ಇಲಾಖೆ ಸೂಚನೆ ನೀಡಿದೆ.

‘ಪಾಲಿಕೆಯ ಬಜೆಟ್‌ ಅನ್ನು ₹11,648.90 ಕೋಟಿಗೆ ಮಿತಗೊಳಿಸಿ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿತ್ತು. ಇದಕ್ಕೆ ಸಚಿವ ಸಂಪುಟದ ಅನುಮೋದನೆ ಪಡೆದಿರಲಿಲ್ಲ. ಹಾಗಾಗಿ ಇದುಕಾನೂನು ಬಾಹಿರ. ಸಚಿವ ಸಂಪುಟದ ಅನುಮೋದನೆ ಪಡೆದು ಪರಿಷ್ಕೃತ ಆದೇಶ ಹೊರಡಿಸುವವರೆಗೂ ಬಜೆಟ್‌ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಜಾಬ್‌ ಕೋಡ್‌ ನೀಡುವುದು ಹಾಗೂ ಟೆಂಡರ್‌ ಕರೆಯುವುದನ್ನು ಸ್ಥಗಿತಗೊಳಿಸಬೇಕು’ ಎಂದು ಅನಿಲ್‌ ಕುಮಾರ್‌ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸೂಚನೆ ನೀಡಿದ್ದ ಹಿನ್ನಲೆಯಲ್ಲಿ ಇಲಾಖೆ ಈ ಕ್ರಮ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.