ಬೆಂಗಳೂರು: ಧರ್ಮಸ್ಥಳದಲ್ಲಿ ಯೂಟ್ಯೂಬ್ ಚಾನೆಲ್ ಹಾಗೂ ಖಾಸಗಿ ಸುದ್ದಿ ವಾಹಿನಿಯ ವರದಿಗಾರರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಆಗ್ರಹಿಸಿದ್ದಾರೆ.
ಈ ಸಂಬಂಧ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಂ.ಎ.ಸಲೀಂ ಅವರಿಗೆ ಪತ್ರ ಬರೆದಿರುವ ಅವರು, ‘ಕುಡ್ಲ ರ್‍ಯಾಂಪೇಜ್’ ಯೂಟ್ಯೂಬ್ ಚಾನೆಲ್‌ನ ಅಜಯ್ ಅಂಚನ್, ಯುನೈಟೆಡ್ ಮೀಡಿಯಾದ ಅಭಿಷೇಕ್, ಸಂಚಾರಿ ಸ್ಟುಡಿಯೊದ ವಿಜಯ್, ಕ್ಯಾಮೆರಾಮನ್ ಸುಹಾನ್ ಅವರ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ಇದು ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆದ ಹಲ್ಲೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2012ರಲ್ಲಿ ನಡೆದ ಸೌಜನ್ಯಾ ಹತ್ಯೆಗೆ ಸಂಬಂಧಿಸಿದಂತೆ ಸೆಲಬ್ರಿಟಿಯೊಬ್ಬರ ಸಂದರ್ಶನಕ್ಕಾಗಿ ವರದಿಗಾರರು ಧರ್ಮಸ್ಥಳ ಗ್ರಾಮದ ಪಾಂಗಳ ರಸ್ತೆಯ ಬಳಿ ನಿಂತಿದ್ದರು. ಅಲ್ಲಿಗೆ ಬಂದ 25 ಜನರ ಗುಂಪು, ಹರ್ಷೇಂದ್ರ ಕುಮಾರ್ ಅವರ ವಿರುದ್ಧ ಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ವರದಿಗಾರರ ಮೇಲೆ ಹಲ್ಲೆ ನಡೆಸಿದೆ. ದುಬಾರಿ ಕ್ಯಾಮೆರಾಗಳಿಗೆ ಹಾನಿ ಮಾಡಲಾಗಿದೆ ಮತ್ತು ಮೆಮೊರಿ ಕಾರ್ಡ್ ಅನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಈ ದಾಳಿಗೆ ಪ್ರಚೋದನೆ ನೀಡಿರುವ ಹಾಗೂ ಆರ್ಥಿಕ ನೆರವು ನೀಡಿರುವ ಅನುಮಾನ ಇದೆ. ಹಾಗಾಗಿ ಸ್ವತಂತ್ರ ತನಿಖೆ ನಡೆಸೇಕು ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.