ADVERTISEMENT

ನಮ್ಮನ್ನು ಕತ್ತಲೆಯಲ್ಲಿ ಇಡಲಾಗಿದೆ: ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಬೇಸರ

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಬೇಸರ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 14:07 IST
Last Updated 22 ಫೆಬ್ರುವರಿ 2026, 14:07 IST
<div class="paragraphs"><p>ಕಾರ್ಯಕ್ರಮದಲ್ಲಿ ವೀರಪ್ಪ ಮೊಯಿಲಿ ಹಾಗೂ ನಾಗಮೋಹನದಾಸ್ ಅವರು ಸಮಾಲೋಚನೆ ನಡೆಸಿದರು. ಸಂಜನಾ ಎಸ್. ಜೈನ್, ಅನಿಲ್ ಜೋಸೆಫ್ ಪಿಂಟೊ ಹಾಗೂ&nbsp;ಅನಿಕೇತನ್ ಸುವ್ವಿ ಉಪಸ್ಥಿತರಿದ್ದರು</p></div>

ಕಾರ್ಯಕ್ರಮದಲ್ಲಿ ವೀರಪ್ಪ ಮೊಯಿಲಿ ಹಾಗೂ ನಾಗಮೋಹನದಾಸ್ ಅವರು ಸಮಾಲೋಚನೆ ನಡೆಸಿದರು. ಸಂಜನಾ ಎಸ್. ಜೈನ್, ಅನಿಲ್ ಜೋಸೆಫ್ ಪಿಂಟೊ ಹಾಗೂ ಅನಿಕೇತನ್ ಸುವ್ವಿ ಉಪಸ್ಥಿತರಿದ್ದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ನಮ್ಮ ಮೆಟ್ರೊ ಪ್ರಯಾಣ ದರ ಹೆಚ್ಚಳ, ಅಮೆರಿಕದಿಂದ ಆಮದು ಸುಂಕ ಏರಿಕೆ ಸೇರಿ ಹಲವು ವಿಚಾರಗಳಲ್ಲಿ ನಾವು ಕತ್ತಲೆಯಲ್ಲಿದ್ದೇವೆ. ಈ ಸಂದರ್ಭದಲ್ಲಿ ಸಮಾಜಕ್ಕೆ ಬೆಳಕು ನೀಡುವ ಕೆಲಸವನ್ನು ಸಾಹಿತ್ಯ ಮಾಡಬೇಕು’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅಭಿಪ್ರಾಯಪಟ್ಟರು. 

ADVERTISEMENT

ಅಂಕುರ ಪ್ರಕಾಶನ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅನಿಕೇತನ್ ಸುವ್ವಿ ಅವರ ‘ಲೀಗಲ್ ಪರ್ಸನಾಲಿಟೀಸ್ ಲೈಫ್‌ ಆ್ಯಂಡ್‌ ಲೆಸನ್ಸ್‌’ ಪುಸ್ತಕ ಜನಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

‘ಮೆಟ್ರೊ ಪ್ರಯಾಣ ದರ ಹೆಚ್ಚಳದ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ, ರಾಜ್ಯ ಸರ್ಕಾರದವರು ಕೇಂದ್ರ ಹೆಚ್ಚಳ ಮಾಡುತ್ತಿದೆ ಎಂದು ಹೇಳಿದರು. ಎರಡು ದಿನಗಳ ಬಳಿಕ ಕೇಂದ್ರ ಸರ್ಕಾರದವರು ರಾಜ್ಯ ಸರ್ಕಾರ ಹೆಚ್ಚಿಸುತ್ತಿದೆ ಎಂದರು. ಮತ್ತೆರಡು ದಿನಗಳ ಬಳಿಕ ಪರಸ್ಪರ ನಾವು ತಡೆ ಹಿಡಿದಿದ್ದೇವೆ ಎಂದು ಹೇಳಿಕೊಂಡರು. ಈ ವಿಚಾರದಲ್ಲಿ ನಾವು ಕತ್ತಲಿನಲ್ಲಿದ್ದೇವೆ. ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಶೇಕಡ 25ರಷ್ಟು ಆಮದು ಸುಂಕ ವಿಧಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ, ದೇಶದ ಪ್ರಧಾನಿ ಮೋದಿ ಅವರು ಟ್ರಂಪ್ ಅವರ ಜತೆಗೆ ಮಾತನಾಡಿದ ಬಳಿಕ ಈ ಸುಂಕವನ್ನು ಶೇ 18ಕ್ಕೆ ಇಳಿಸಿದರೆಂದು ಸಂಭ್ರಮಿಸಲಾಯಿತು. ಶೇ 2ರಷ್ಟು ಇದ್ದ ಸುಂಕವನ್ನು ಶೇ 18ಕ್ಕೆ ಹೆಚ್ಚಿಸಿರುವುದು ಚಿಕ್ಕ ಏರಿಕೆಯೇ? ಈ ರೀತಿ ನಮ್ಮನ್ನು ಕತ್ತಲೆಯಲ್ಲಿ ಇಟ್ಟಿದ್ದಾರೆ’ ಎಂದು ಹೇಳಿದರು.

‘ಪಾರದರ್ಶಕ ಜಗತ್ತು, ಮುಂದುವರಿದ ತಂತ್ರಜ್ಞಾನ, ಶಿಕ್ಷಣ, ಕಾನೂನು ಇದ್ದರೂ ಜಗತ್ತಿನ ಜನರನ್ನು ಇವತ್ತಿಗೂ ಕತ್ತಲೆಯಲ್ಲಿ ಇಟ್ಟಿದ್ದಾರೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಯಾವ ಸಮುದಾಯಕ್ಕೆ ಎಷ್ಟು ಪ್ರಾತಿನಿಧ್ಯ ಸಿಕ್ಕಿದೆ ಎಂಬುದರ ಬಗ್ಗೆ ಮಾಹಿತಿಯಿಲ್ಲವಾಗಿದೆ. ಬೆಂಗಳೂರು ತಂತ್ರಾಂಶದ ರಾಜಧಾನಿಯಾಗಿದೆ. ಆದರೆ, ಇಲ್ಲಿ ಅಜೀಂ ಪ್ರೇಮ್‌ಜಿ, ಇನ್ಫೊಸಿಸ್‌ನಲ್ಲಿ ಯಾವ ಜಾತಿಗಳಿಗೆ ಎಷ್ಟು ಪ್ರಾತಿನಿಧ್ಯ ಸಿಕ್ಕಿದೆ ಎಂಬ ಬಗ್ಗೆ ವಿವರ ಲಭ್ಯವಾಗುವುದಿಲ್ಲ. ಆದ್ದರಿಂದ ಜಗತ್ತಿಗೆ ಬೆಳಕು ನೀಡುವ ಪುಸ್ತಕಗಳು ಅಗತ್ಯ’ ಎಂದರು. 

ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ, ‘ಕಾನೂನು ಹಾಗೂ ಅದರ ನಾನಾ ಪ‍್ರಕಾರದ ಬಗ್ಗೆ ಅನೇಕರು ಪುಸ್ತಕ ಬರೆದಿದ್ದಾರೆ. ಆದರೆ, ನ್ಯಾಯಾಂಗ ಕ್ಷೇತ್ರದ ಮಾದರಿ ವ್ಯಕ್ತಿತ್ವಗಳನ್ನು ಕಟ್ಟಿಕೊಟ್ಟ ಈ ಪುಸ್ತಕ ವಿಶೇಷ ಮಹತ್ವ ಪಡೆದುಕೊಳ್ಳಲಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೃತಿಯ ಬಗ್ಗೆ ಮಾತನಾಡಿದ ವಕೀಲೆ ಸಂಜನಾ ಎಸ್. ಜೈನ್, ‘ನ್ಯಾಯಾಂಗ ಕ್ಷೇತ್ರಕ್ಕೆ ಬರುವವರಿಗೆ ಈ ಪುಸ್ತಕ ಮಾರ್ಗದರ್ಶಿಯಾಗಲಿದೆ. ಸ್ಫೂರ್ತಿದಾಯಕ ವ್ಯಕ್ತಿತ್ವಗಳನ್ನು ಕಟ್ಟಿಕೊಡಲಾಗಿದೆ’ ಎಂದು ಶ್ಲಾಘಿಸಿದರು. 

ಕ್ರೈಸ್ಟ್‌ ವಿಶ್ವವಿದ್ಯಾಲದ ಕುಲಸಚಿವ ಅನಿಲ್ ಜೋಸೆಫ್ ಪಿಂಟೊ, ಕೃತಿಯ ಲೇಖಕ ಅನಿಕೇತನ್ ಸುವ್ವಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.