
ಬೆಂಗಳೂರು: ‘ಜೀವನದಲ್ಲಿ ಗಳಿಸಿದ ಜ್ಞಾನ ಹಾಗೂ ಪಡೆದ ಅನುಭವವನ್ನು ನಮ್ಮಲ್ಲಿಯೇ ಉಳಿಸಿಕೊಳ್ಳದೆ, ಅವನ್ನು ಹಂಚಿಕೊಂಡರೆ ಒಂದಷ್ಟು ಮಂದಿಗೆ ದಾರಿದೀಪವಾಗುತ್ತದೆ’ ಎಂದು ಸುಪ್ರೀಂ ಕೋರ್ಟ್ ನೀವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಅಭಿಪ್ರಾಯಪಟ್ಟರು.
ಶೇಷಾದ್ರಿಪುರಂ ಕಾಲೇಜಿನ ಕನ್ನಡ ಸಂಘ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರ ಆತ್ಮಕಥನ ‘ಚಕ್ಕಡಿಯಿಂದ ತಕ್ಕಡಿಯವರೆಗೆ’ ಪುಸ್ತಕ ಜನಾರ್ಪಣೆಯಾಯಿತು.
ಈ ವೇಳೆ ಮಾತನಾಡಿದ ಶಿವರಾಜ ಪಾಟೀಲ ಅವರು, ‘ಜ್ಞಾನ ಮತ್ತು ಅನುಭವವನ್ನು ಹಂಚದಿದ್ದರೆ ನಮ್ಮ ತಲೆ ದಾಸ್ತಾನು ಕೇಂದ್ರವಾಗಲಿದೆ. ನಮ್ಮ ಜೀವನದಲ್ಲಿ ನಡೆದ ಘಟನೆ, ಪಡೆದ ಅನುಭವ ಹಾಗೂ ಮಾಡಿದ ಕೆಲಸ ಇನ್ನೊಬ್ಬರಿಗೆ ಸ್ಫೂರ್ತಿ ಮತ್ತು ಪ್ರಯೋಜನ ಆಗಬೇಕು. ಬದುಕಿರುವಾಗಲೇ ಜ್ಞಾನದೋಸಹ ಮಾಡಿದರೆ ಈ ಕಾರ್ಯದಿಂದ ಸತ್ತ ಮೇಲೆಯೂ ಬದುಕುತ್ತೇವೆ. ಜ್ಞಾನ–ಅನುಭವವನ್ನು ಅವಕಾಶ ಸಿಕ್ಕಾಗಲೆಲ್ಲ ಹಂಚಿಕೊಳ್ಳಬೇಕು’ ಎಂದು ಹೇಳಿದರು.
ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ, ‘ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದ ಶಿವರಾಜ ಪಾಟೀಲ ಅವರು, ತಮ್ಮ ಪರಿಶ್ರಮ ಹಾಗೂ ಪ್ರತಿಭೆಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾದರು. ವಿನಯ, ಕರ್ತವ್ಯಪ್ರಜ್ಞೆ, ಪ್ರಾಮಾಣಿಕತೆ ಮತ್ತು ದೃಢ ಮನಸ್ಸು ಒಟ್ಟಿಗೆ ಸೇರಿದರೆ ಏನಾಗಬಹುದು ಎಂಬುವುದಕ್ಕೆ ಜೀವಂತಸಾಕ್ಷಿ ಶಿವರಾಜ ಪಾಟೀಲರು. ಈ ಕೃತಿಯು ಪಾಟೀಲರ ಬದುಕಿನ ಹಾದಿ, ಕೈಗೊಂಡ ಕಾರ್ಯವನ್ನು ಸಂಕೇತಿಸುತ್ತದೆ. ಸಾಮಾನ್ಯನೊಬ್ಬ ಅಸಾಮಾನ್ಯನಾಗಿ ತನ್ನ ಬದುಕನ್ನು ರೂಪಿಸಿಕೊಂಡ ಬಗೆಯನ್ನು ಸರಳವಾಗಿ ವಿವರಿಸಲಾಗಿದೆ’ ಎಂದರು.
ಕೃತಿಯ ಲೇಖಕ ಕೆ.ಎಲ್. ವಿಶ್ವನಾಥ್ ಶರ್ಮ, ‘ನನ್ನಂತೆ ಇತರರಿಗೂ ಅವರ ಆತ್ಮಕಥನ ಪ್ರೇರಣೆಯಾಗಬೇಕು. ವಿಶೇಷವಾಗಿ ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮತ್ತು ಮಾರ್ಗಸೂಚಿ ನೀಡುವಂತಾಗಬೇಕು’ ಎಂದು ಹೇಳಿದರು.
ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಪ್ರಾಂಶುಪಾಲ ಮೇಜರ್ ಆನಂದಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.