ADVERTISEMENT

ಶ್ರೀಮಂತಿಕೆ, ಅಧಿಕಾರ ಪೋಷಿತ ಸಮಾಜ: ಸಂತೋಷ್ ಹೆಗ್ಡೆ ಬೇಸರ

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಬೇಸರ *ಸಾಹಿತಿ ಅ.ರಾ. ಮಿತ್ರಗೆ ಕಸಾಪ ದತ್ತಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 14:07 IST
Last Updated 5 ಏಪ್ರಿಲ್ 2025, 14:07 IST
ಕಾರ್ಯಕ್ರಮದಲ್ಲಿ ಅ.ರಾ. ಮಿತ್ರ ಹಾಗೂ ಪತ್ನಿ ಲಲಿತಾ ದಂಪತಿಗೆ ‘ಅ.ನ.ಕೃಷ್ಣರಾಯರ ಸ್ಮಾರಕ: ವಿದ್ಯಾರಣ್ಯ ಸಮಗ್ರ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಗೊ.ರು. ಚನ್ನಬಸಪ್ಪ, ಮಹೇಶ ಜೋಶಿ, ಎನ್. ಸಂತೋಷ್ ಹೆಗ್ಡೆ, ಪದ್ಮಿನಿ ನಾಗರಾಜ್, ಎಂ.ವಿ. ಸತ್ಯನಾರಾಯಣ ಉಪಸ್ಥಿತರಿದ್ದರು
–ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಅ.ರಾ. ಮಿತ್ರ ಹಾಗೂ ಪತ್ನಿ ಲಲಿತಾ ದಂಪತಿಗೆ ‘ಅ.ನ.ಕೃಷ್ಣರಾಯರ ಸ್ಮಾರಕ: ವಿದ್ಯಾರಣ್ಯ ಸಮಗ್ರ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಗೊ.ರು. ಚನ್ನಬಸಪ್ಪ, ಮಹೇಶ ಜೋಶಿ, ಎನ್. ಸಂತೋಷ್ ಹೆಗ್ಡೆ, ಪದ್ಮಿನಿ ನಾಗರಾಜ್, ಎಂ.ವಿ. ಸತ್ಯನಾರಾಯಣ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಈ ಸಮಾಜದಲ್ಲಿ ಶ್ರೀಮಂತಿಕೆ, ಅಧಿಕಾರದ ತಿಕ್ಕಾಟ ಹಾಗೂ ಪೈಪೋಟಿಯಿಂದಾಗಿ ಪ್ರಾಮಾಣಿಕತೆಗೆ ಬೆಲೆ ಇಲ್ಲವಾಗಿದೆ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು. 

ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಮತ್ತು ವಿದ್ಯಾರಣ್ಯ ಪ್ರತಿಷ್ಠಾನ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಾಹಿತಿ ಅ.ರಾ.ಮಿತ್ರ ಅವರಿಗೆ ‘ಅ.ನ.ಕೃಷ್ಣರಾಯರ ಸ್ಮಾರಕ: ವಿದ್ಯಾರಣ್ಯ ಸಮಗ್ರ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು. ಈ ಪ್ರಶಸ್ತಿಯು ₹1 ಲಕ್ಷ ನಗದು ಒಳಗೊಂಡಿದೆ. 

‘ಹಿಂದೆ ತಪ್ಪು ಮಾಡಿದವರಿಗೆ ಕಾನೂನಿನಡಿ ಶಿಕ್ಷೆಯ ಜತೆಗೆ, ಸಮಾಜವು ಬಹಿಷ್ಕಾರದಂತಹ ಶಿಕ್ಷೆ ವಿಧಿಸುತ್ತಿತ್ತು. ಶ್ರೀಮಂತಿಕೆ, ಅಧಿಕಾರದ ಮೇಲೆ ನಿಂತಿರುವ ಈಗಿನ ಸಮಾಜದಲ್ಲಿ, ಪ್ರಾಮಾಣಿಕತೆ ಬಗ್ಗೆ ಮಾತನಾಡುವುದೇ ಅಪರಾಧವೆಂಬ ವಾತಾವರಣ ನಿರ್ಮಾಣವಾಗಿದೆ. ಜಾಮೀನಿನ ಮೇಲೆ ಜೈಲಿನಿಂದ ಹೊರಬರುವ ವ್ಯಕ್ತಿಗೂ ಸೇಬಿನ ಹಾರ ಹಾಕಿ ಬರಮಾಡಿಕೊಳ್ಳುವ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಅಧಿಕಾರದಲ್ಲಿರುವವರ ಸ್ವಾರ್ಥ ಮತ್ತು ದುರಾಸೆಯು ಭ್ರಷ್ಟಾಚಾರವನ್ನು ಪೋಷಿಸುತ್ತಿದೆ. ಅನ್ಯ ಮಾರ್ಗದಿಂದ ಹಣ ಸಂಪಾದಿಸಿದವರು ಆದಾಯ ತೆರಿಗೆ (ಐಟಿ) ಅಧಿಕಾರಿಗಳ, ದರೋಡೆಕೊರರ ಭಯ, ಆತಂಕದಲ್ಲಿಯೇ ಬದುಕುತ್ತಿದ್ದಾರೆ’ ಎಂದರು. 

ADVERTISEMENT

‘ಅಪರಾಧಗಳು ಹಾಗೂ ಭ್ರಷ್ಟಾಚಾರವನ್ನು ಹತ್ತಿರದಿಂದ ಕಂಡಿದ್ದೇನೆ. ಜೀಪ್‌ ಹಗರಣ, ಬೊಫೋರ್ಸ್ ಹಗರಣ, ಕಾಮನ್‌ವೆಲ್ತ್ ಹಗರಣ, 2ಜಿ ಹಗರಣ, ಕಲ್ಲಿದ್ದಲು ಹಗರಣ ಸೇರಿ ವಿವಿಧ ಹಗರಣಗಳಲ್ಲಿ ಅಧಿಕಾರದಲ್ಲಿ ಇದ್ದವರು ಸಾವಿರಾರು ಕೋಟಿ ರೂಪಾಯಿ ಲೂಟಿ ಹೊಡೆದಿದ್ದಾರೆ. ರಾಜಕೀಯದಲ್ಲಿ ಆಡಳಿತದಲ್ಲಿರುವವರ ಸ್ವಾರ್ಥ-ದುರಾಸೆ ಇವುಗಳಿಗೆಲ್ಲಾ ಕಾರಣ. ಎಲ್ಲ ಕಾಯಿಲೆಗಳಿಗೂ ಮದ್ದಿದೆ. ಆದರೆ, ದುರಾಸೆಗೆ ಇಲ್ಲವಾಗಿದೆ. ಇಂತಹ ಸಮಾಜ ಬದಲಾಗಬೇಕಾದರೆ ಜೀವನದಲ್ಲಿ ತೃಪ್ತಿ ಮತ್ತು ಮಾನವೀಯ ಮೌಲ್ಯವನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ, ‘ದತ್ತಿ ಪ್ರಶಸ್ತಿಗಳ ಮೊತ್ತಕ್ಕಿಂತ ಆಶಯ ಮುಖ್ಯವಾಗುತ್ತದೆ. ಅ.ರಾ. ಮಿತ್ರ ಅವರು ಹಾಸ್ಯದ ಜತೆಗೆ ಗಂಭೀರ ಸಂಶೋಧಕ ಹಾಗೂ ಭಾಷಾ ವಿಜ್ಞಾನಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅ.ರಾ.ಮಿತ್ರ ಅವರ ಸಮಗ್ರ ಸಾಹಿತ್ಯ ಸಂಪುಟವನ್ನು ಹೊರತರಬೇಕು. ಕನ್ನಡ ಸಾಹಿತ್ಯ ಪರಿಷತ್ತು ಶಾಲಾ–ಕಾಲೇಜುಗಳಲ್ಲಿ ಅ.ರಾ. ಮಿತ್ರ ಅವರ ಸಂವಾದ–ಉಪನ್ಯಾಸಗಳನ್ನು ಏರ್ಪಡಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಪ್ರಶಸ್ತಿ ಪುರಸ್ಕೃತ ಅ.ರಾ.ಮಿತ್ರ ಅವರು ಸಂತಸ ವ್ಯಕ್ತಪಡಿಸಿದರು. ಕಸಾಪ ಅಧ್ಯಕ್ಷ ಮಹೇಶ ಜೋಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.