ADVERTISEMENT

ಕಡಲೆಕಾಯಿ ಪರಿಷೆ: ಕಳೆಗಟ್ಟಿದ ಸಂಭ್ರಮ

ಮೂರು ದಿನಗಳ ಜಾತ್ರೆ ಇಂದಿನಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 20:52 IST
Last Updated 28 ನವೆಂಬರ್ 2021, 20:52 IST
ನಗರದ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ಅಂಗವಾಗಿ ಭಾನುವಾರವೇ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು– ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್‌.
ನಗರದ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ಅಂಗವಾಗಿ ಭಾನುವಾರವೇ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು– ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್‌.   

ಬೆಂಗಳೂರು: ನಗರದ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದ ಬಳಿ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆ ಮತ್ತೆ ಕಳೆಗಟ್ಟಿದೆ.

ಕಡಲೆಕಾಯಿ ಪರಿಷೆ ಸೋಮವಾರದಿಂದ ಮೂರು ದಿನಗಳ ಕಾಲ ನಡೆಯಲಿದೆ. ಜಾತ್ರೆಯ ಆರಂಭಕ್ಕೆ ಇಲ್ಲಿನ ಬೀದಿಗಳಲ್ಲಿ ಎರಡು ದಿನಗಳ ಮುಂಚಿತವಾಗಿಯೇ ಸಂಭ್ರಮ ಮನೆ ಮಾಡಿದೆ. ರಸ್ತೆಯ ಇಕ್ಕೆಲಗಳಲ್ಲಿ ಕಡಲೆಕಾಯಿ ರಾಶಿಗಳು ಗಮನ ಸೆಳೆಯುತ್ತಿವೆ. ಕಡಲೆಕಾಯಿ ಖರೀದಿಸಲು ಭಾನುವಾರ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು.

ಮುಜರಾಯಿ ಇಲಾಖೆ ಹಾಗೂ ಬಿಬಿಎಂಪಿ ಸಹಯೋಗದೊಂದಿಗೆ ನಡೆಯುವ ಕಡಲೆ‌ಕಾಯಿ ಪರಿಷೆಗೆ ಸೋಮವಾರ ಬೆಳ್ಳಿಗೆ 10.30ಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಿ, ನಂದಿಗೆ ಕಡಲೆಕಾಯಿ ಅಭಿಷೇಕ ಮಾಡಲಾಗುತ್ತದೆ.

ADVERTISEMENT

ಕೋವಿಡ್‌ ಕಾರಣಕ್ಕೆ ಕಳೆದ ವರ್ಷ ಪರಿಷೆಗೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇದರಿಂದ, ಕಡಲೆಕಾಯಿ ವ್ಯಾಪಾರ ವಹಿವಾಟು ನಡೆದಿರಲಿಲ್ಲ.

ಪರಿಷೆಯಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಬಿಬಿಎಂಪಿ ನಿರ್ಬಂಧ ಹೇರಿದೆ. ಕಡಲೆಕಾಯಿ ಜತೆಗೆ ಆಟಿಕೆಗಳು, ಕರಕುಶಲ ವಸ್ತುಗಳು, ತಿಂಡಿ ತಿನಿಸುಗಳ ಮಳಿಗೆಗಳ ವ್ಯಾಪಾರ ವಹಿವಾಟವೂ ಜೋರಾಗಿ ನಡೆಯುತ್ತಿದೆ.ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ಬೀದಿಯ ಎರಡೂ ಬದಿ ಅಂಗಡಿಗಳನ್ನು ತೆರೆಯಲಾಗಿದೆ.

ಪರಿಷೆ ನಡೆಯುತ್ತಿರುವುದರಿಂದ ಈ ಪ್ರದೇಶದಲ್ಲಿ ದಟ್ಟಣೆ ನಿಯಂತ್ರಣಕ್ಕಾಗಿ ವಾಹನಗಳ ಸಂಚಾರ ಮಾರ್ಗಗಳನ್ನು ಡಿ.1ರವರೆಗೆ ಬದಲಾವಣೆ ಮಾಡಲಾಗಿದೆ.

ನವಂಬರ್ ತಿಂಗಳಲ್ಲಿ ಕಾರ್ತಿಕ ಮಾಸದ ಕೊನೆ ಸೋಮವಾರ ಕಡಲೆಕಾಯಿ ಪರಿಷೆ ಆಚರಿಸಲಾಗುತ್ತದೆ. ಪರಂಪರಾನುಗತವಾಗಿ ನಡೆಯುತ್ತಾ ಬಂದಿರುವ ಈ ಪರಿಷೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.