
ಬಸವನಗುಡಿಯಲ್ಲಿ ಸೋಮವಾರ ಯುವತಿಯರು ಸಂಭ್ರಮದಿಂದ ಕಡಲೆಕಾಯಿ ಖರೀದಿಸಿದರು
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಬೆಂಗಳೂರು: ಬಸವನಗುಡಿಯ ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಹಾಗೂ ಐದು ಎತ್ತುಗಳಿಗೆ ಕಡಲೆಕಾಯಿ ಗಿಡ ತಿನ್ನಿಸುವ ಮೂಲಕ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಐದು ದಿನಗಳ ಪರಿಷೆಗೆ ಸೋಮವಾರ ಚಾಲನೆ ನೀಡಿದರು.
ಪ್ರತಿ ವರ್ಷವೂ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಕಡಲೆಕಾಯಿ ಪರಿಷೆ ಶುರುವಾಗುತ್ತದೆ. ಎರಡು ದಿನಗಳ ಕಡಲೆಕಾಯಿ ಪರಿಷೆಯನ್ನು ಮೊದಲ ಬಾರಿಗೆ ಐದು ದಿನಕ್ಕೆ (ನವೆಂಬರ್ 21ರವರೆಗೆ) ವಿಸ್ತರಿಸಲಾಗಿದೆ. ಭದ್ರತೆ, ಕುಡಿಯುವ ನೀರು, ಶೌಚಾಲಯದಂತಹ ಮೂಲಸೌಕರ್ಯ ಒದಗಿಸಲಾಗಿದೆ.
ಮೊದಲ ದಿನವೇ ನಿರೀಕ್ಷೆಗೂ ಮೀರಿ ಜನ ಜಮಾಯಿಸಿದ್ದರು. ಎತ್ತ ಕಣ್ಣು ಹಾಯಿಸಿದರೂ ಬಗೆಬಗೆಯ ಕಡಲೆಕಾಯಿಗಳನ್ನು ರಾಶಿ ಹಾಕಲಾಗಿದೆ. ರಸ್ತೆಯ ಎರಡೂ ಬದಿ ಕಡಲೆಕಾಯಿ ರಾಶಿ ಹಾಕಿಕೊಂಡು ವ್ಯಾಪಾರ ಮಾಡಲಾಗುತ್ತಿದೆ. ಮಕ್ಕಳು, ವಿದ್ಯಾರ್ಥಿಗಳು ಕಡಲೆಕಾಯಿ ಸವಿಯುತ್ತಾ ಸಂತಸ ವ್ಯಕ್ತಪಡಿಸಿದರು. ನೆರೆ ರಾಜ್ಯಗಳಿಂದಲೂ ವ್ಯಾಪಾರಿಗಳು ಬಂದಿದ್ದು, ಲಾಭದ ನಿರೀಕ್ಷೆಯಲ್ಲಿದ್ದಾರೆ.
ವ್ಯಾಪಾರಿಗಳು ಕಾಗದ ಅಥವಾ ಬಟ್ಟೆ ಚೀಲಗಳಲ್ಲಿ ಕಡಲೆಕಾಯಿ ನೀಡುತ್ತಿದ್ದರು. ಪ್ಲಾಸ್ಟಿಕ್ ಮುಕ್ತ ವಾತಾವರಣ ಇತ್ತು.
ಬುಲ್ ಟೆಂಪಲ್ ರಸ್ತೆ, ಗಾಂಧಿ ಬಜಾರ್, ಎನ್.ಆರ್. ರಸ್ತೆಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದವು. ಎಲ್ಲೆಡೆ ಹೂವಿನ ಅಲಂಕಾರ ಮಾಡಲಾಗಿದೆ. ಅಂಗಡಿಯವರು ಬಟ್ಟೆ ಬ್ಯಾಗ್‌ಗಳನ್ನು ಬಳಸಲು ಮತ್ತು ಸಾರ್ವಜನಿಕರಿಗೆ ‘ಪರಿಷೆಗೆ ಬನ್ನಿ, ಕೈ ಚೀಲ ತನ್ನಿ’ಎಂಬ ಘೋಷಣೆಯೊಂದಿಗೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಪ್ಲಾಸ್ಟಿಕ್ ಮುಕ್ತ ಪರಿಷೆಗೆ ಜಾಗೃತಿ ಮೂಡಿಸಿದರು.
ಬುಲ್ ಟೆಂಪಲ್ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಈ ಬಾರಿಯೂ ಸುಂಕ ವಸೂಲಾತಿ ಟೆಂಡರ್ ಕೈಬಿಡಲಾಗಿದೆ. ಯಾವುದೇ ಸುಂಕ ಸಂಗ್ರಹಿಸುತ್ತಿಲ್ಲ. ಆರೋಗ್ಯ, ಸ್ವಚ್ಛತೆ, ನೈರ್ಮಲ್ಯಕ್ಕೆ ಒತ್ತು ನೀಡಲಾಗಿದ್ದು, ನೂಕು ನುಗ್ಗಲು ಉಂಟಾಗದಂತೆ ತಡೆಯಲು ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ.
ಬಸವನಗುಡಿಯ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಎನ್‌ಎಸ್‌ಎಸ್ ಘಟಕವು ಪತ್ರಿಕೆಗಳಿಂದ 50 ಸಾವಿರ ಪರಿಸರಸ್ನೇಹಿ ಕಾಗದದ ಚೀಲಗಳನ್ನು ತಯಾರಿಸಿ ಪರಿಷೆಯಲ್ಲಿನ ಮಾರಾಟಗಾರರಿಗೆ ವಿತರಿಸಿತು. ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಕೈಗೊಂಡ ಕ್ರಮಕ್ಕೆ ಸ್ಥಳೀಯರು ಮತ್ತು ವ್ಯಾಪಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ‘ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಕಳೆದ ವರ್ಷ ಸುಮಾರು 5 ಲಕ್ಷಕ್ಕೂ ಹೆಚ್ಚಿನ ಜನ ಪಾಲ್ಗೊಂಡಿದ್ದರು. ಈ ವರ್ಷ ಇನ್ನೂ ಹೆಚ್ಚಿನ ಮಂದಿ ಭೇಟಿ ನೀಡುವ ಸಾಧ್ಯತೆಯಿದೆ. ಹಾಗಾಗಿ, ಅಗತ್ಯ ಭದ್ರತಾ ಸಿಬ್ಬಂದಿ, ಮಾರ್ಷಲ್‌ಗಳ ನಿಯೋಜನೆ, ಸಿ.ಸಿ,ಟಿ.ವಿ ಕ್ಯಾಮೆರಾ ಅಳವಡಿಕೆ, ಕುಡಿಯುವ ನೀರಿನ ವ್ಯವಸ್ಥೆ, ತುರ್ತು ಚಿಕಿತ್ಸಾ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ’ ಎಂದರು.
ಕಡಲೆಕಾಯಿ ಪರಿಷೆಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಬೇಕೆಂಬ ಉದ್ದೇಶದಿಂದ ಪ್ಲಾಸ್ಟಿಕ್ ಬಳಕೆ ಮಾಡುವ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚಬೇಕೆಂದು ಹಾಗೂ ಬ್ಯಾನರ್‌ಗಳನ್ನು ಹಾಕದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ-ರಾಮಲಿಂಗಾರೆಡ್ಡಿ, ಮುಜರಾಯಿ ಇಲಾಖೆ ಸಚಿವ
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ‘ಲಕ್ಷಾಂತರ ಮಂದಿ ಭಾಗವಹಿಸುವ ಪರಿಷೆಯು ಸಣ್ಣ ವ್ಯಾಪಾರಿಗಳ ಉತ್ತಮ ವ್ಯಾಪಾರ-ವಹಿವಾಟಿಗೂ ಕಾರಣವಾಗಿದೆ. ಪೋಷಕರು ಮಕ್ಕಳನ್ನು ಪರಿಷೆಗೆ ಕರೆದುಕೊಂಡು ಬನ್ನಿ, ಇಲ್ಲಿನ ಕಥೆ ಹೇಳಿ, ಸಾಂಸ್ಕೃತಿಕ ವೈಭವ ತೋರಿಸುವ ಮೂಲಕ ಪರಂಪರೆ ಉಳಿಸಬೇಕು’ ಎಂದು ಕರೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಯು.ಬಿ.ವೆಂಕಟೇಶ್ ಮಾತನಾಡಿ, ‘ಮೈಸೂರು ದಸರಾದಲ್ಲಿ ದೀಪಾಲಂಕಾರ ಮಾಡಿದವರನ್ನು ಕರೆಸಿ ಬಸವನಗುಡಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ದೀಪಾಲಂಕಾರ ಮಾಡಲಾಗಿದೆ. ಐದು ದಿನವೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ’ ಎಂದರು.
ಶಾಸಕರಾದ ಉದಯ್ ಗರುಡಾಚಾರ್, ಎಲ್.ಎ.ರವಿ ಸುಬ್ರಹ್ಮಣ್ಯ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಕೆ.ಎಂ ನಾಗರಾಜ್, ರಾಜೇಂದ್ರ ಕುಮಾರ್, ಶರತ್ ಬಿ. ಉಪಸ್ಥಿತರಿದ್ದರು.
ಕೆಂಪಾಂಬುದಿ ಕೆರೆಯಲ್ಲಿ ತೆಪ್ಪೋತ್ಸವ
ದೊಡ್ಡ ಬಸವಣ್ಣ ದೇವಾಲಯದ ಆವರಣದಲ್ಲಿ ಕಿಕ್ಕೇರಿ ಕೃಷ್ಣಮೂರ್ತಿ ಅವರಿಂದ ಹಾಗೂ ನರಸಿಂಹಸ್ವಾಮಿ ಉದ್ಯಾನದಲ್ಲಿ ವಿಜಯ ವಿಠಲ ಶಾಲೆಯ ವತಿಯಿಂದ ಸಂಗೀತ ಕಾರ್ಯಕ್ರಮ ಜರುಗಿದವು. ಜತೆಗೆ ಕೆಂಪಾಂಬುದಿ ಕೆರೆಯಲ್ಲಿ ತೆಪ್ಪೋತ್ಸವ ನೇರವೇರಿತು. ಮಂಗಳವಾರ ಸಂಜೆ 7 ಗಂಟೆಗೆ ನಾಗರಾಜ್ ಕೋಟೆ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.