ADVERTISEMENT

ಕೆಲಸದ ಆಮಿಷವೊಡ್ಡಿ 80 ಮಂದಿಗೆ ವಂಚನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 20:52 IST
Last Updated 22 ಡಿಸೆಂಬರ್ 2020, 20:52 IST

ಬೆಂಗಳೂರು: ಪ್ರತಿಷ್ಠಿತ ಕಂಪನಿಗಳಲ್ಲಿ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಹುದ್ದೆ ಕೊಡಿಸುವುದಾಗಿ ಆಮಿಷವೊಡ್ಡಿ 80ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಂಚನೆ ಬಗ್ಗೆ ಹಾಸನದ ಚೇತನ್ ಎಂಬುವರು ದೂರು ನೀಡಿದ್ದಾರೆ. ಆರೋಪಿಗಳು ಎನ್ನಲಾದ ಇನ್‌ಪೆಟ್ರೊ ಟೆಕ್ನಾಲಜೀಸ್ ಕಂಪನಿಯ ರಾಜೇಶ್ ಕುನಾರ್ ನೆಹಾರ್, ಸಚಿನ್ ರಾಥೋಡ್, ಪ್ರವೀಣ್, ಪ್ರಿಯಾಂಕಾ, ಸುನಿತಾ ಸಿಂಗ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಎಂಜಿನಿಯರಿಂಗ್ ಪದವೀಧರರಾದ ಚೇತನ್, ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಹಲವೆಡೆ ಅರ್ಜಿಯನ್ನೂ ಸಲ್ಲಿಸಿದ್ದರು. ಇನ್‌ಪೆಟ್ರೊ ಟೆಕ್ನಾಲಜೀಸ್ ಕಂಪನಿ ಹೆಸರಿನಲ್ಲಿ ಅವರಿಗೆ ಕರೆ ಮಾಡಿದ್ದ ಆರೋಪಿಗಳು, ‘ಪ್ರತಿಷ್ಠಿತ ಕಂಪನಿಯಲ್ಲಿ ವ್ಯವಸ್ಥಾಪಕ ಹುದ್ದೆಗಳು ಖಾಲಿ ಇವೆ. ₹ 1.50 ಲಕ್ಷ ನೀಡಿದರೆ ಕೆಲಸ ಕೊಡಿಸುತ್ತೇವೆ’ ಎಂದಿದ್ದರು. ಅದನ್ನು ನಂಬಿದ್ದ ಚೇತನ್, ಹಣ ಕೊಟ್ಟಿದ್ದರು. ಸಂದರ್ಶನ ನಡೆಸಿದಂತೆ ನಾಟಕವಾಡಿದ್ದ ಆರೋಪಿಗಳು, ಕೆಲಸಕ್ಕೆ ತರಬೇತಿ ಪಡೆಯಬೇಕೆಂದು ಹೇಳಿ ಪ್ರತ್ಯೇಕವಾಗಿ ₹ 17,250 ಶುಲ್ಕ ಪಡೆದಿದ್ದರು. ಇತ್ತೀಚೆಗೆ ಕಂಪನಿ ಕಚೇರಿಯೇ ಬಂದ್ ಆಗಿದ್ದು, ಆರೋಪಿಗಳು ನಾಪತ್ತೆಯಾಗಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ADVERTISEMENT

‘ಆರೋಪಿಗಳು, ಇದುವರೆಗೂ 80ಕ್ಕೂ ಹೆಚ್ಚು ಮಂದಿಯಿಂದ ಹಣ ಪಡೆದು ವಂಚಿಸಿರುವ ಸಂಗತಿ ದೂರಿನಲ್ಲಿದೆ. ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗುತ್ತಿದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.