ADVERTISEMENT

ಸಾಮಾಜಿಕ -ಶೈಕ್ಷಣಿಕ ಸಮೀಕ್ಷೆ: ‘ಕಾಡುಗೊಲ್ಲ’ ನಮೂದಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 16:05 IST
Last Updated 17 ಸೆಪ್ಟೆಂಬರ್ 2025, 16:05 IST
   

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಂದರ್ಭದಲ್ಲಿ ಕಾಡುಗೊಲ್ಲ ಸಮಾಜದವರು ‘ಕಾಡುಗೊಲ್ಲ’ ಎಂದೇ ನಮೂದಿಸಬೇಕು ಎಂದು ರಾಜ್ಯ ಕಾಡುಗೊಲ್ಲ ಸಮುದಾಯದ ಮುಖಂಡ ಇ. ದೊಡ್ಡನಾಗಯ್ಯ ಮತ್ತು ವಿಶ್ವರೂಪ ಕಾಡುಗೊಲ್ಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಸಿ.ಕುಮಾರ್ ಮನವಿ ಮಾಡಿದ್ದಾರೆ.

ಧರ್ಮದ ಕಾಲಂನಲ್ಲಿ ಹಿಂದೂ ಹಾಗೂ ಜಾತಿಕಾಲಂನಲ್ಲಿ ಕಾಡುಗೊಲ್ಲ ಎಂದೇ ನಮೂದಿಸಬೇಕು. ಬೇರೆ ಉಪ ಜಾತಿಯನ್ನು ನಮೂದಿಸಬಾರದು. ಉಪಜಾತಿಯಲ್ಲಿಯೂ ಕಾಡುಗೊಲ್ಲ ಎಂದೇ ನಮೂದಿಸಬೇಕು. ಬೇರೆ ಯಾವುದೇ ಒತ್ತಡಕ್ಕೆ ಮಣಿಯಬಾರದು ಎಂದು ತಿಳಿಸಿದ್ದಾರೆ.

ಕಾಡುಗೊಲ್ಲರು ಬಡ ಸಮುದಾಯವಾಗಿದ್ದು, ಶಿಕ್ಷಣದಲ್ಲಿ ಹಿಂದುಳಿದಿದ್ದಾರೆ. ಪ್ರಾಥಮಿಕ ಹಂತದಲ್ಲಿಯೇ ವಿದ್ಯಾಭ್ಯಾಸ ಮೊಟಕುಗೊಳಿಸಿ ಇಂದಿಗೂ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಪಶುಸಂಗೋಪನೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುವ ಸಮುದಾಯವಾಗಿದೆ. ಇಂದಿಗೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿರುವ ಈ ಜನಾಂಗವು ಕಾಡು ಮತ್ತು ತಾಲ್ಲೂಕಿನ ಗಡಿಯ ಅಂಚಿನಲ್ಲಿ, ಗುಡ್ಡಗಾಡು, ಪ್ರದೇಶಗಳಲ್ಲಿ ಅಲ್ಪ ಸ್ವಲ್ಪ ಇರುವ ಜಮೀನುನಲ್ಲಿ ವ್ಯವಸಾಯ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಪೂರಕವಾಗುವಂತೆ ಸಮೀಕ್ಷೆಯಲ್ಲಿ ನಿಖರವಾದ ಮಾಹಿತಿ  ನೀಡಬೇಕು ಎಂದು ಕೋರಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.