ADVERTISEMENT

ಕಗ್ಗದಾಸನಪುರ ಕೆರೆ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 19:32 IST
Last Updated 12 ಆಗಸ್ಟ್ 2021, 19:32 IST
ಕಗ್ಗದಾಸಪುರ ಕೆರೆ ಅಂಗಳದಲ್ಲಿ ಒತ್ತುವರಿ ತೆರವು ಮಾಡಲಾಯಿತು
ಕಗ್ಗದಾಸಪುರ ಕೆರೆ ಅಂಗಳದಲ್ಲಿ ಒತ್ತುವರಿ ತೆರವು ಮಾಡಲಾಯಿತು   

ಬೆಂಗಳೂರು: ಬೆಂಗಳೂರು ಪೂರ್ವ ತಾಲ್ಲೂಕಿನಸಿ.ವಿ.ರಾಮನ್ ನಗರ ವಾರ್ಡ್‌ ವ್ಯಾಪ್ತಿಯ ಕಗ್ಗದಾಸನಪುರ ಕೆರೆಯ ಒತ್ತುವರಿಯನ್ನು ಬಿಬಿಎಂಪಿ ಅಧಿಕಾರಿಗಳು ಗುರುವಾರ ತೆರವು ಮಾಡಿದರು.

‘ಕಗ್ಗದಾಸನಪುರ ಗ್ರಾಮದ ಸರ್ವೇ ನಂಬರ್ 141 ಹಾಗೂ ಬೈರಸಂದ್ರ ಗ್ರಾಮದ ಸರ್ವೇ ನಂಬರ್ 5ರಲ್ಲಿ ಒಟ್ಟು47 ಎಕರೆ ವಿಸ್ತೀರ್ಣದಲ್ಲಿ ಕೆರೆ ಇದೆ. ಇದರಲ್ಲಿ 2.8 ಎಕರೆ ಒತ್ತುವರಿಯಾಗಿತ್ತು’.

‘ಇದರಲ್ಲಿ1.5 ಎಕರೆ ತೆರವು ಕಾರ್ಯಾಚರಣೆ ಆರಂಭಗೊಂಡಿದ್ದು, ₹25 ಕೋಟಿ ಮೌಲ್ಯದ 22 ಗುಂಟೆಯಷ್ಟು ಒತ್ತುವರಿ ಜಾಗವನ್ನುಗುರುವಾರ ತೆರವುಗೊಳಿಸಲಾಗಿದೆ. ತೆರವು ಮಾಡಿದ ಸ್ಥಳದಲ್ಲಿ ಕೂಡಲೇ ತಂತಿ ಬೇಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ADVERTISEMENT

ಕಗ್ಗದಾಸನಪುರ ಕೆರೆ ಅಂಗಳದ ಜಮೀನಿನಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು, ನಿರ್ಮಿಸಿರುವ ಕಾಂಪೌಂಡ್ ಗೋಡೆ, ಅಪಾರ್ಟ್‌ಮೆಂಟ್ ಸಮುಚ್ಚಯ ಹಾಗೂ ಮನೆಗಳ ತೆರವು ಕಾರ್ಯಾಚರಣೆಗೆ ಹೈಕೋರ್ಟ್‌ ಆದೇಶಿಸಿತ್ತು. ಒತ್ತುವರಿದಾರರಿಗೆ ಪೂರ್ವ ತಾಲ್ಲೂಕಿನ ತಹಶೀಲ್ದಾರ್ ನೋಟಿಸ್‌ ಜಾರಿ ಮಾಡಿದ್ದರು.

‘ಕೆರೆಯಂಗಳದ 8 ಗುಂಟೆಯಲ್ಲಿ ಶ್ರೀಜಲಕಂಠೇಶ್ವರ ದೇವಾಲಯದ ಪೂಜಾರಿ ಮನೆ ಇದೆ. ಇದರ ತೆರವಿಗೆ ಸ್ಥಳೀಯರಿಂದ ವಿರೋಧವಿದೆ. ಇತರೆ ಒತ್ತುವರಿದಾರರಾದ ವೆಂಕಟಸುಬ್ರಹ್ಮಣ್ಯ ಮತ್ತು ಎಸ್‌.ಲಕ್ಷ್ಮೀನಾರಾಯಣ ಅವರಿಗೆ ಸೇರಿದ 3 ಗುಂಟೆ ಪ್ರದೇಶದ ವಿಲ್ಲಾ ಮತ್ತು ಮನೆ ಒತ್ತುವರಿ ಸಂಬಂಧ ಹೈಕೋರ್ಟ್‌ ಹಾಗೂ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣದಲ್ಲಿ ತಡೆಯಾಜ್ಞೆ ಇದೆ’.

‘ಐಶ್ಚರ್ಯ ಲೇಕ್ ವ್ಯೂ ರೆಸಿಡೆನ್ಸಿ ಅಪಾರ್ಟ್‌ಮೆಂಟ್ ಸಮುಚ್ಚಯದ 9 ಗುಂಟೆ ಹಾಗೂ ಮಠಪತಿ ಮೆರಿಡಿಯನ್ ಅಪಾರ್ಟ್‌ಮೆಂಟ್‌ಗೆ ಸೇರಿದ 5 ಮನೆಗಳ ತೆರವಿಗೂ ತಡೆಯಾಜ್ಞೆ ಇರುವುದರಿಂದ ಅಂತಿಮ ಆದೇಶದ ನಂತರ ಒತ್ತುವರಿ ತೆರವು ಮಾಡಲಾಗುವುದು. ತಡೆಯಾಜ್ಞೆ ಇರುವ ಜಾಗಗಳನ್ನು ಹೊರತುಪಡಿಸಿ, ಉಳಿದ ಒತ್ತುವರಿಗಳನ್ನು ತೆರವುಗೊಳಿಸಲಾಗುತ್ತಿದೆ’ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

‘ರಸ್ತೆ, ಸ್ವಾಮಿ ವಿವೇಕಾನಂದ ಯೋಗ ಕಟ್ಟಡ, ಪಾಲಿಕೆಯ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರ ಒಳಗೊಂಡಂತೆ ಒಟ್ಟು 22 ಗುಂಟೆ ಸರ್ಕಾರಿ ಒತ್ತುವರಿಯನ್ನು ತೆರವುಗೊಳಿಸಲಾಗುವುದು’ ಎಂದು ಬಿಬಿಎಂಪಿ ಕೆರೆ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪಾಲಿಕೆಯ ವಿಶೇಷ ಆಯುಕ್ತರು, ಸಿ.ವಿ.ರಾಮನ್ ನಗರ ವಿಭಾಗದ ಎಂಜಿನಿಯರ್‌ಗಳು, ಕಂದಾಯ ಇಲಾಖೆಯ ತಹಶೀಲ್ದಾರ್, ಬೆಂಗಳೂರು ಪೂರ್ವ ತಾಲ್ಲೂಕು ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರು, ಕೆ.ಆರ್.ಪುರ ತಾಲ್ಲೂಕು ಭೂಮಾಪಕರು ಹಾಗೂ ಪೊಲೀಸರು ಕಾರ್ಯಾಚರಣೆಯಲ್ಲಿ
ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.