ADVERTISEMENT

ಠಾಣೆ ಮೆಟ್ಟಿಲೇರಿದ ಬಿಜೆಪಿ ಶಾಸಕ: ನ್ಯಾಯ ಕೇಳಿದ ಮಹಿಳೆ

₹ 2 ಕೋಟಿ ಬ್ಲ್ಯಾಕ್‌ಮೇಲ್ ಆರೋಪದಡಿ ಎಫ್‌ಐಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 16:29 IST
Last Updated 7 ಫೆಬ್ರುವರಿ 2022, 16:29 IST
ಶಾಸಕ ರಾಜಕುಮಾರ್ ಪಾಟೀಲ ತೇಲ್ಕೂರ
ಶಾಸಕ ರಾಜಕುಮಾರ್ ಪಾಟೀಲ ತೇಲ್ಕೂರ   

ಬೆಂಗಳೂರು: ‘₹ 2 ಕೋಟಿ ನೀಡುವಂತೆ ಮಹಿಳೆಯೊಬ್ಬರು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಸೇಡಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ ತೇಲ್ಕೂರ ಅವರು ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ಈ ಆರೋಪವನ್ನು ಅಲ್ಲಗಳೆದಿರುವ ಮಹಿಳೆ, ‘ಶಾಸಕರಿಂದಲೇ ನನಗೆ ಮಗು ಹುಟ್ಟಿದೆ. ಜೀವನಾಂಶ ಕೋರಿದ್ದಾಗಿ ಅವರು ಈ ರೀತಿ ಆರೋಪ ಮಾಡುತ್ತಿದ್ದು, ನನಗೆ ನ್ಯಾಯ ಬೇಕು’ ಎಂದಿದ್ದಾರೆ.

ಶಾಸಕನ ದೂರಿನಡಿ 40 ವರ್ಷದ ಮಹಿಳೆ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಹಿಳೆಯನ್ನು ವಶಕ್ಕೆ ಪಡೆದಿದ್ದ ಪೊಲೀಸರು, ವಿಚಾರಣೆ ಮಾಡಿ ಕಳುಹಿಸಿದ್ದಾರೆ. ಮಹಿಳೆ ಸಹ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿರುವ ಆರೋಪ ವ್ಯಕ್ತವಾಗಿದೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಯೊಬ್ಬರು, ‘ಕ್ರಿಮಿನಲ್ ಪಿತೂರಿ (ಐಪಿಸಿ 120 ಬಿ), ಸುಲಿಗೆ (ಐಪಿಸಿ 384), ಜೀವಕ್ಕೆ ಕುತ್ತು ತಂದ (ಐಪಿಸಿ 387) ಆರೋಪದಡಿ ಮಹಿಳೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅವರ ಹೇಳಿಕೆ ಪಡೆದು ಪರಿಶೀಲಿಸಲಾಗುತ್ತಿದೆ’ ಎಂದರು.

ADVERTISEMENT

ಶಾಸಕನ ದೂರಿನಲ್ಲಿ ಏನಿದೆ? ‘ಕಲಬುರ್ಗಿ ನಿವಾಸಿಯಾದ ಮಹಿಳೆ ಹಾಗೂ ಅವರ ಪತಿ, 2009ರಲ್ಲಿ ಪರಿಚಯವಾಗಿದ್ದರು. ತಮ್ಮ ಜಮೀನು ವ್ಯಾಜ್ಯವನ್ನು ನನ್ನ ಮೂಲಕ ಇತ್ಯರ್ಥಪಡಿಸಿಕೊಂಡಿದ್ದರು. ಅವರ ಮಗನ ಶಾಲಾ ದಾಖಲಾತಿಗೂ ಸಹಾಯ ಮಾಡಿದ್ದೆ. ಅದನ್ನೇ ದುರುಪಯೋಗಪಡಿಸಿಕೊಂಡ ಮಹಿಳೆ, 2018ರಲ್ಲಿ ನನ್ನ ವಿರುದ್ಧವೇ ಹಣದ ಆರೋಪ ಮಾಡಿದ್ದಳು. ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ಹಲವೆಡೆ ದೂರುಗಳನ್ನು ಕೊಟ್ಟು ಮರ್ಯಾದೆಗೆ ಧಕ್ಕೆ ತಂದಿದ್ದರು. ಜೊತೆಗೆ, ಜೀವ ಬೆದರಿಕೆಯೊಡ್ಡಿದ್ದರು’ ಎಂದು ರಾಜಕುಮಾರ್ ಪಾಟೀಲ ತೇಲ್ಕೂರ ದೂರಿನಲ್ಲಿ ತಿಳಿಸಿದ್ದಾರೆ.

‘ತಮ್ಮ ಬಳಿ ಖಾಸಗಿ ಫೋಟೊ ಇರುವುದಾಗಿ ಹೇಳಿದ್ದ ಮಹಿಳೆ, ₹ 2 ಕೋಟಿಗೆ ಬೇಡಿಕೆ ಇರಿಸಿದ್ದರು. ಹಣ ನೀಡದಿದ್ದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದಾರೆ. ನನ್ನ ರಾಜಕೀಯ ವಿರೋಧಿಗಳೂ ಇದಕ್ಕೆ ಸಹಕಾರ ನೀಡುತ್ತಿದ್ದಾರೆ. ಮಹಿಳೆ ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದೂ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.