ADVERTISEMENT

ಕಮಲಾನಗರ: ಎರಡು ಕಟ್ಟಡ ನೆಲಸಮ, ಮಹಾಮಳೆಗೆ ವಾಲಿದ್ದ 2 ಅಂತಸ್ತಿನ ಕಟ್ಟಡ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 20:16 IST
Last Updated 13 ಅಕ್ಟೋಬರ್ 2021, 20:16 IST
ಕಾರ್ಯಾಚರಣೆ ಬಳಿಕ ಬೀಳುತ್ತಿರುವ ಕಟ್ಟಡ –ಪ್ರಜಾವಾಣಿ ಚಿತ್ರಗಳು/ ರಂಜು ಪಿ.
ಕಾರ್ಯಾಚರಣೆ ಬಳಿಕ ಬೀಳುತ್ತಿರುವ ಕಟ್ಟಡ –ಪ್ರಜಾವಾಣಿ ಚಿತ್ರಗಳು/ ರಂಜು ಪಿ.   

ಬೆಂಗಳೂರು: ಮಹಾಮಳೆಯ ಅಬ್ಬರಕ್ಕೆ ನಗರದ ಕಮಲಾನಗರದಲ್ಲಿ ಕುಸಿದಿದ್ದ ಮೂರು ಅಂತಸ್ತಿನ ಕಟ್ಟಡ ಮತ್ತು ಅದಕ್ಕೆ ಹೊಂದಿಕೊಂಡಿದ್ದ ಎರಡು ಅಂತಸ್ತಿನ ಕಟ್ಟಡವನ್ನೂ ಬಿಬಿಎಂಪಿ ಅಧಿಕಾರಿಗಳು ಬುಧವಾರ ನೆಲಸಮ ಮಾಡಿದ್ದಾರೆ. ಕಟ್ಟಡ ಬಿದ್ದಿದ್ದರಿಂದ ಕೆಳಗಿದ್ದ ಶೆಡ್ ರೂಪದ ಮನೆಗಳು ಅಪ್ಪಚ್ಚಿಯಾದವು.

ಅಬ್ಬರದಿಂದ ಸುರಿಯುತ್ತಿರುವ ಮಳೆಗೆ ನಗರದಲ್ಲಿ ಕಟ್ಟಡಗಳು ಸಾಲು ಸಾಲಾಗಿ ಕುಸಿಯುತ್ತಿದ್ದು, ಅವುಗಳ ಸಾಲಿಗೆ ಕಮಲಾನಗರದ ಎರಡು ಕಟ್ಟಡಗಳೂ ಬುಧವಾರ ಸೇರಿಕೊಂಡವು.

ಇಲ್ಲಿನ ಶಂಕರನಾಗ್ ಬಸ್ ನಿಲ್ದಾಣದ ಬಳಿ 15 ವರ್ಷಗಳ ಹಿಂದೆ 15X40 ಆಳತೆಯಲ್ಲಿ ನಿರ್ಮಿಸಿದ್ದ ಮೂರು ಅಂತಸ್ತಿನ ಕಟ್ಟಡ ಮಂಗಳವಾರ ರಾತ್ರಿ ಬಿರುಕು ಬಿಟ್ಟಿತ್ತು. ಶಬ್ದ ಕೇಳಿದ ಕೂಡಲೇ ಮನೆಗಳಿಂದ ನಿವಾಸಿಗಳೆಲ್ಲರೂ ಹೊರಕ್ಕೆ ಬಂದಿದ್ದರು. ಬುಧವಾರ ಬೆಳಿಗ್ಗೆ ಬಿಬಿಎಂಪಿ ಅಧಿಕಾರಿಗಳು ಈ ಕಟ್ಟಡವನ್ನು ಸುರಕ್ಷಿತವಾಗಿ ನೆಲಸಮ ಮಾಡಿದರು.

ADVERTISEMENT

ಈ ಕಟ್ಟಡದಲ್ಲಿ ಒಟ್ಟು ಆರು ಮನೆಗಳಿದ್ದವು. ನಾಲ್ಕು ಮನೆಗಳಲ್ಲಿ ಭೋಗ್ಯಕ್ಕೆ (ಲೀಸ್‍ಗೆ) ಮತ್ತು ಎರಡು ಮನೆಗಳನ್ನು ಬಾಡಿಗೆಗೆ ನೀಡಲಾಗಿತ್ತು. ಈ ಮನೆಗಳಲ್ಲಿ 15ಕ್ಕೂ ಹೆಚ್ಚು ಜನ ವಾಸವಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ನೆಲಮಹಡಿ ಕುಸಿದಿದ್ದರಿಂದ ಜೋರಾಗಿ ಶಬ್ದವಾಗಿದೆ. ಕೂಡಲೇ ಕಟ್ಟಡದಿಂದ ನಿವಾಸಿಗಳೆಲ್ಲರೂ ಹೊರಗೆ ಬಂದಿದ್ದಾರೆ.

ಸುದ್ದಿ ತಿಳಿದ ಕೂಡಲೇ ಬಿಬಿಎಂಪಿ, ಅಗ್ನಿಶಾಮಕ, ರಾಷ್ಟ್ರೀಯ ವಿಪತ್ತು ನಿರ್ವಹಣೆ (ಎನ್‌ಡಿಆರ್‌ಎಫ್‌) ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ‍ಪರಿಶೀಲನೆ ನಡೆಸಿದರು. ನಿವಾಸಿಗಳನ್ನು ಸಮೀಪದ ಸರ್ಕಾರಿ ಶಾಲೆ ಮತ್ತು ಸಂಬಂಧಿಕರ ಮನೆಗಳಿಗೆ ಸ್ಥಳಾಂತರ ಮಾಡಲಾಯಿತು.

ಕಟ್ಟಡದ ಒಳಕ್ಕೆ ಮತ್ತೆ ಯಾರನ್ನೂ ಬಿಡದೆ ಬುಧವಾರ ಬೆಳಿಗ್ಗೆ 9ರ ಸುಮಾರಿಗೆ ಕಟ್ಟಡ ನೆಲಸಮ ಕಾರ್ಯಾಚರಣೆ ಆರಂಭಿಸಿದರು. ಕಟ್ಟಡ ಬೀಳುವಾಗ ಹಾನಿಯಾಗುವ ಸಂಭವ ಇದ್ದುದರಿಂದ ಅಕ್ಕಪಕ್ಕದ 10ಕ್ಕೂ ಹೆಚ್ಚು ಮನೆಗಳಿಂದ ನಿವಾಸಿಗಳನ್ನು ಖಾಲಿ ಮಾಡಿಸಲಾಗಿತ್ತು. ಮಧ್ಯಾಹ್ನ 12 ಗಂಟೆ ವೇಳೆಗೆ ಮೂರು ಅಂತಸ್ತಿನ ಕಟ್ಟಡ ಸುರಕ್ಷಿತವಾಗಿ ನೆಲಸಮವಾಯಿತು. ವಾಲಿದ್ದ ಕಟ್ಟಡ ಬೀಳುವ ಜಾಗದಲ್ಲೇ ಇದ್ದ ಶೆಡ್ ರೀತಿಯ ಮೂರು ಮನೆಗಳಲ್ಲಿನ ನಿವಾಸಿಗಳನ್ನು ಮನೆಯಿಂದ ಖಾಲಿ ಮಾಡಿಸಲಾಗಿತ್ತು. ಕಟ್ಟಡ ಬಿದ್ದ ರಭಸಕ್ಕೆ ಆ ಮನೆಗಳೂ ಅವಶೇಷವಾದವು.

ಮೂರು ಅಂತಸ್ತಿನ ಕಟ್ಟಡಕ್ಕೆ ಹೊಂದಿಕೊಂಡಂತೆಯೇ ಇದ್ದ ಎರಡು ಅಂತಸ್ತಿನ ಮತ್ತೊಂದು ಕಟ್ಟಡ ಕೂಡ ಸಾಕಷ್ಟು ಹಾನಿಯಾಗಿತ್ತು. ಕುಸಿಯುವ ಆತಂಕ ಇತ್ತು. ಸ್ಥಳದಲ್ಲೇ ನಿರ್ಧಾರ ಕೈಗೊಂಡ ಬಿಬಿಎಂಪಿ ಅಧಿಕಾರಿಗಳು ಅದನ್ನೂ ನೆಲಸಮ ಮಾಡಿದರು.

‘ನಾವು ಹುಟ್ಟಿ ಬೆಳೆದ ಮನೆಯನ್ನು ನಮ್ಮದಲ್ಲದ ತಪ್ಪಿಗೆ ನೆಲಸಮ ಮಾಡಲಾಗಿದೆ. ಮನೆ ಕಳೆದುಕೊಂಡು ಎಲ್ಲಿಗೆ ಹೋಗಬೇಕು’ ಎಂದು ಮನೆಯ ಮಾಲೀಕ ರಮೇಶ್ ಆಕ್ರೋಶ ವ್ಯಕ್ತಪಡಿಸಿದರು. ಆ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟರು.

ಎರಡು ನೋಟಿಸ್ ನೀಡಿದ್ದ ಬಿಬಿಎಂಪಿ

ಶಿಥಿಲಗೊಂಡಿದ್ದ ಕಟ್ಟಡಗಳ ಸಮೀಕ್ಷೆಯನ್ನು ಬಿಬಿಎಂಪಿ ಅಧಿಕಾರಿಗಳು 2019ರಲ್ಲೇ ನಡೆಸಿದ್ದರು. ಆ ಪಟ್ಟಿಯಲ್ಲಿದ್ದ ಮೂರು ಅಂತಸ್ತಿನ ಕಟ್ಟಡಕ್ಕೂ ಎರಡು ಬಾರಿ ನೋಟಿಸ್ ನೀಡಲಾಗಿತ್ತು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಕಟ್ಟಡ ಮಾಲೀಕರು ಬ್ಯಾಂಕ್ ಸಾಲ ಮಾಡಿದ್ದರಿಂದ ‘ಈ ಕಟ್ಟಡ ಸಿಂಡಿಕೇಟ್ ಬ್ಯಾಂಕ್ ಶೇಷಾದ್ರಿಪುರಕ್ಕೆ ಸೇರಿದ ಆಸ್ತಿ’ ಎಂದು ಕಟ್ಟಡದ ಮೇಲೆ ಬರೆಯಲಾಗಿತ್ತು.

ಉಟ್ಟಬಟ್ಟೆಯಲ್ಲೇ ಬೀದಿ ಪಾಲಾದರು

ರಾತ್ರಿ ಕಟ್ಟಡ ಕುಸಿಯುವ ಶಬ್ದ ಕೇಳುತ್ತಿದ್ದಂತೆ ಉಟ್ಟ ಬಟ್ಟೆಯಲ್ಲೇ ಮನೆಯಿಂದ ಹೊರಗೆ ಓಡಿ ಬಂದಿದ್ದ ಮೂರು ಅಂತಸ್ತಿನ ಕಟ್ಟಡದ ಆರು ಮನೆಗಳ ನಿವಾಸಿಗಳು ಅಕ್ಷರಶಃ ಬೀದಿಪಾಲಾಗಿದ್ದಾರೆ.

ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಳ್ಳುವುದಾಗಿ ಗೋಗರೆದರೂ ಮನೆಯ ಒಳಗೆ ಹೋಗಲು ಪೊಲೀಸರು ಅವಕಾಶ ನೀಡಲಿಲ್ಲ. ಅಪಾಯ ಕಡಿಮೆ ಇದ್ದ ಮೂರು ಮನೆಗಳಿಗೆ ಹೋಗಿ ಬೆಲೆಬಾಳುವ ವಸ್ತು ಮತ್ತು ಕಾಗದ ಪತ್ರಗಳನ್ನು ತೆಗೆದುಕೊಳ್ಳಲು ಮೂರು ನಿಮಿಷ ಅವಕಾಶ ನೀಡಲಾಗಿತ್ತು. ಉಳಿದ ಮನೆಗಳಲ್ಲಿ ಅಪಾಯ ಜಾಸ್ತಿ ಇದ್ದುದರಿಂದ ಅವಕಾಶ ನೀಡಲಿಲ್ಲ. ಆ ಮನೆಗಳ ನಿವಾಸಿಗಳು ಕಣ್ಣೀರಿಟ್ಟು ಪೊಲೀಸರ ಬಳಿ ಬೇಡಿಕೊಳ್ಳುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.

‘ಕೂಲಿ ಕೆಲಸ ಮಾಡಿಕೊಂಡು ಒಂದೊಂದೇ ಸಾಮಗ್ರಿ ಖರೀದಿಸಿ ಬದುಕು ಕಟ್ಟಿಕೊಂಡಿದ್ದೆವು. ಒಮ್ಮೆಲೇ ಬರಿಗೈ ಆಗಿದ್ದೇವೆ. ಮೈಮೇಲೆ ಹಾಕಿರುವ ಬಟ್ಟೆಗಳನ್ನು ಬಿಟ್ಟರೆ ನಮ್ಮದಾಗಿ ಬೇರೆ ಏನೂ ಇಲ್ಲ. ಕೊನೆಯದಾಗಿ ಒಂದು ತೊಟ್ಟು ವಿಷ ಕೊಟ್ಟುಬಿಡಿ’ ಎಂದು ಮಹಿಳೆಯೊಬ್ಬರು ಗೋಳಾಡಿದರು.

ನೆರವಿಗೆ ಬದ್ಧ: ಸಚಿವ ಗೋಪಾಲಯ್ಯ

‘ಮನೆಯಲ್ಲಿದ್ದ ಎಲ್ಲ ವಸ್ತುಗಳನ್ನು ಕಳೆದುಕೊಂಡು ಬರಿಗೈ ಆಗಿರುವ ನಿವಾಸಿಗಳ ನೆರವಿಗೆ ಸರ್ಕಾರ ನಿಲ್ಲಲಿದೆ. ವೈಯಕ್ತಿಕವಾಗಿ ನಾನು ಆ ಕುಟುಂಬಗಳಿಗೆ ಸಹಾಯ ಮಾಡುತ್ತೇನೆ’ ಎಂದು ಸಚಿವ ಕೆ. ಗೋಪಾಲಯ್ಯ ತಿಳಿಸಿದರು.

ಕಟ್ಟಡ ಅಪಾಯದಲ್ಲಿರುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಎರಡು ಬಾರಿ ನೋಟಿಸ್ ನೀಡಿದ್ದರು. ಭೋಗ್ಯ ಮತ್ತು ಬಾಡಿಗೆಗೆ ಇದ್ದ ನಿವಾಸಿಗಳಿಗೆ ಮುಂಗಡ ಮೊತ್ತವನ್ನು ಮಾಲೀಕರು ವಾಪಸ್ ನೀಡಿದ್ದರೆ ಅವರೆಲ್ಲರೂ ಖಾಲಿ ಮಾಡುತ್ತಿದ್ದರು ಎಂದರು.

‘ಮಾಲೀಕರು ನಿರ್ಲಕ್ಷ್ಯ ವಹಿಸಿದ್ದರಿಂದ ಈ ರೀತಿ ಆಗಿದೆ. ಅವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು. ಬಾಡಿಗೆದಾರರಿಗೆ ತೊಂದರೆ ಆಗಿದ್ದು, ಅವರ ನೆರವಿಗೆ ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದರು.

‘ಸದ್ಯಕ್ಕೆ ಕೆಲವರು ಸಂಬಂಧಿಕರ ಮನೆಗಳಿಗೆ ಹೋಗಿದ್ದರೆ, ಇನ್ನೂ ಕೆಲವರು ಸರ್ಕಾರಿ ಶಾಲೆಯಲ್ಲಿ ಉಳಿದಿದ್ದಾರೆ. 10 ದಿನ ಅಲ್ಲಿ ಉಳಿಯಲು ತೊಂದರೆ ಇಲ್ಲ. ಸರ್ಕಾರದಿಂದ ಅವರಿಗೆ ಎಷ್ಟು ಪರಿಹಾರ ನೀಡಲು ಸಾಧ್ಯ ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮನೆ ಮಾರಾಟಕ್ಕಿಟ್ಟಿದ್ದೆ’

‘ಮನೆಯನ್ನು 2016ರಲ್ಲಿ ₹39 ಲಕ್ಷಕ್ಕೆ ಖರೀದಿ ಮಾಡಿದ್ದೆ. ಬ್ಯಾಂಕ್‌ನಿಂದ ₹26 ಲಕ್ಷ ಸಾಲ ಪಡೆದಿದ್ದೆ. ಮನೆ ಮಾರಾಟಕ್ಕೆ ಇಟ್ಟಿದ್ದೆ. ಅಷ್ಟರಲ್ಲಿ ಹೀಗಾಗಿದೆ’ ಎಂದು ಮನೆಯ ಮಾಲೀಕರಾದ ರಾಜೇಶ್ವರಿ ಹೇಳಿದರು.

‘ಮನೆ ಖರೀದಿಸಿದ ಬಳಿಕ ಅದರ ಮೇಲೆ ಒಂದು ಅಂತಸ್ತು ನಿರ್ಮಿಸಿದ್ದೆ. ನಾಲ್ಕು ಮನೆಗಳನ್ನು ಭೋಗ್ಯಕ್ಕೆ ಮತ್ತು ಎರಡು ಮನೆಯನ್ನು ಬಾಡಿಗೆಗೆ ನೀಡಿದ್ದೆ. ಮನೆ ಮಾರಾಟ ಮಾಡಿ ಎಲ್ಲರಿಗೂ ಹಣ ವಾಪಸ್ ಕೊಡಲು ನಿರ್ಧರಿಸಿದ್ದೆ’ ಎಂದು ರಾಜೇಶ್ವರಿ ಕಣ್ಣೀರಿಟ್ಟರು.

ಮಗಳ ಮದುವೆಯ ಚಿನ್ನ ಮಣ್ಣುಪಾಲು

ಈ ಕಟ್ಟದಲ್ಲಿ ವಾಸವಿದ್ದ ನಿವಾಸಿಯೊಬ್ಬರು ಮಗಳ ಮದುವೆಗೆಂದು ಮಾಡಿಸಿಟ್ಟಿದ್ದ ₹6 ಲಕ್ಷ ಮೌಲ್ಯದ ಚಿನ್ನದ ಆಭರಣಗಳು ಕಟ್ಟಡದೊಂದಿಗೆ ಮಣ್ಣುಪಾಲಾಗಿವೆ.

ನಿಶ್ಚಯವಾಗಿದ್ದ ಮದುವೆಯನ್ನು ದೀಪಾವಳಿ ಬಳಿಕ ನೆರವೇರಿಸಲು ನಿರ್ಧರಿಸಲಾಗಿತ್ತು. ಕಟ್ಟಡ ಕುಸಿದ ಆನುಭವ ಆದ ಕೂಡಲೇ ಹೊರಗೆ ಓಡಿ ಬಂದೆವು. ಮನೆಯೊಳಗೆ ಪ್ರವೇಶ ಮಾಡಲು ಅಧಿಕಾರಿಗಳು ಬಿಡಲಿಲ್ಲ ಎಂದು ಅವರು ಕಣ್ಣೀರಿಟ್ಟರು.

‘ಒಂದು ನೆಕ್ಲೇಸ್, ಎರಡು ಉಂಗುರ, ಸರ, ಕೊರಳ ಹಾರ ಮನೆಯ ಕಪಾಟಿನಲ್ಲಿ ಇಟ್ಟಿದ್ದೆವು. ಅಂಗಲಾಚಿದರೂ ಒಳಗೆ ಹೋಗಲು ಪೊಲೀಸರು ಅವಕಾಶ ನೀಡಲಿಲ್ಲ. ಉರುಳಿದ ಕಟ್ಟಡದ ಜೊತೆಗೆ ಮಗಳ ಭವಿಷ್ಯವೂ ಮಣ್ಣುಪಾಲಾಗಿದೆ’ ಎಂದು ಬಿಕ್ಕಳಿಸಿ ಅತ್ತರು.

ಕಟ್ಟಡ ನೆಲಸಮ ಆದ ಬಳಿಕವೂ ಆ ಸ್ಥಳಕ್ಕೆ ಪೊಲೀಸರು ಯಾರನ್ನೂ ಬಿಟ್ಟಿಲ್ಲ.ಬಿದ್ದಿರುವ ಕಟ್ಟಡದಲ್ಲಿ ವಸ್ತುಗಳನ್ನು ಎತ್ತಿಕೊಳ್ಳಲು ಹೋದಾಗ ಗೋಡೆ ಅಥವಾ ಇನ್ನಿತರ ವಸ್ತುಗಳು ಬಿದ್ದು ಅಪಾಯವಾಗುವ ಸಾಧ್ಯತೆ ಇರುವ ಕಾರಣ ‍ಪೂರ್ತಿ ನೆಲಸಮ ಆಗುವ ತನಕ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.