ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಸಂಘ–ಸಂಸ್ಥೆಗಳಿಗೆ ‘ಧನಸಹಾಯ’ ಪುನರಾರಂಭ

ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾರ್ಗಸೂಚಿ ಪರಿಷ್ಕರಣೆ

ವರುಣ ಹೆಗಡೆ
Published 26 ಜೂನ್ 2025, 23:49 IST
Last Updated 26 ಜೂನ್ 2025, 23:49 IST
ಕನ್ನಡ ಭವನದ ಹೊರನೋಟ
ಕನ್ನಡ ಭವನದ ಹೊರನೋಟ   

ಬೆಂಗಳೂರು: ಸಾಂಸ್ಕೃತಿಕ ವಾತಾವರಣ ರೂಪಿಸಲು ಶ್ರಮಿಸುತ್ತಿರುವ ಸಂಘ–ಸಂಸ್ಥೆಗಳಿಗೆ ಆರ್ಥಿಕ ನೆರವು ಒದಗಿಸುವ ‘ಧನಸಹಾಯ’ ಯೋಜನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪುನರಾರಂಭಿಸುತ್ತಿದ್ದು, ಸಂಘ–ಸಂಸ್ಥೆಗಳ ಆಯ್ಕೆಯಲ್ಲಿ ಪಾರದರ್ಶಕತೆ ತರಲು ಯೋಜನೆಯ ಮಾರ್ಗಸೂಚಿಯನ್ನು ಪರಿಷ್ಕರಣೆ ಮಾಡುತ್ತಿದೆ. 

ಅನುದಾನದ ಕೊರತೆಯಿಂದಾಗಿ ಇಲಾಖೆಯು ಈ ಯೋಜನೆಯಡಿ 2024–25ನೇ ಸಾಲಿಗೆ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ಆರ್ಥಿಕ ನೆರವು ಒದಗಿಸಿರಲಿಲ್ಲ. ಇದರಿಂದಾಗಿ ಕಲಾವಿದರು ಹಾಗೂ ಸಂಘ–ಸಂಸ್ಥೆಗಳ ಮುಖ್ಯಸ್ಥರು ಸಂಕಷ್ಟಕ್ಕೆ ಸಿಲುಕಿದ್ದರು. ಯೋಜನೆ ಮುಂದುವರಿಯುವ ಬಗ್ಗೆಯೂ ಸಾಂಸ್ಕೃತಿಕ ವಲಯದಲ್ಲಿ ಗೊಂದಲ ಉಂಟಾಗಿತ್ತು. ಈ ಸಾಲಿಗೆ ಯೋಜನೆಯನ್ನು ಪುನರಾರಂಭಿಸಲು ಇಲಾಖೆ ಮುಂದಾಗಿದ್ದು, ನಿಯಮಿತವಾಗಿ ಕಾರ್ಯಕ್ರಮ ಮಾಡುತ್ತಿರುವ ಅರ್ಹ ಸಂಘ–ಸಂಸ್ಥೆಗಳಿಗೆ ಮಾತ್ರ ಅನುದಾನ ಒದಗಿಸಲು ಯೋಜನೆಯ ಮಾರ್ಗಸೂಚಿಯಲ್ಲಿ ಕೆಲ ಮಾರ್ಪಾಡು ಮಾಡುತ್ತಿದೆ.

ಈ ಯೋಜನೆಗೆ ₹ 5 ಕೋಟಿ ಅನುದಾನ ಮೀಸಲಿಡಲಾಗಿದೆ. ಆರ್ಥಿಕ ನೆರವಿಗೆ ಸಂಬಂಧಿಸಿದಂತೆ ಸಂಘ–ಸಂಸ್ಥೆಗಳಿಂದ ಬರುವ ಅರ್ಜಿಗಳನ್ನು ಪರಿಶೀಲಿಸಿ, ಆಯ್ಕೆಯಾದ ಸಂಘ–ಸಂಸ್ಥೆಗಳಿಗೆ ಒದಗಿಸಲು ಹೆಚ್ಚುವರಿ ಅನುದಾನ ಅಗತ್ಯವಿದ್ದಲ್ಲಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲು ಇಲಾಖೆ ಕಾರ್ಯಯೋಜನೆ ರೂಪಿಸಿದೆ. 

ADVERTISEMENT

ಸೇವಾಸಿಂಧುವಿನಲ್ಲಿ ಅರ್ಜಿ: ಧನಸಹಾಯ ಯೋಜನೆಯಡಿ ಅನುದಾನ ಪಡೆಯಲು ನೋಂದಾಯಿತ ಸಂಘ–ಸಂಸ್ಥೆಗಳು ಸೇವಾಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಯೋಜನೆಯ ಹಾಲಿ ಮಾರ್ಗಸೂಚಿ ಪ್ರಕಾರ, ಪ್ರತಿ ವರ್ಷ ಜೂನ್ ತಿಂಗಳಲ್ಲೇ ಅರ್ಜಿ ಆಹ್ವಾನಿಸಿ ಸಂಘ–ಸಂಸ್ಥೆಗಳ ಕಾರ್ಯಚಟುವಟಿಕೆಗಳನ್ನು ಜಿಲ್ಲಾ ಹಂತದಲ್ಲಿ ಪರಿಶೀಲಿಸಬೇಕು. ಆದರೆ, ಮಾರ್ಗಸೂಚಿ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿರುವುದರಿಂದ, ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅರ್ಜಿ ಆಹ್ವಾನಿಸಲು ಇಲಾಖೆ ನಿರ್ಧರಿಸಿದೆ. ಇಲಾಖೆ ಮೂಲಗಳ ಪ್ರಕಾರ ಜುಲೈನಲ್ಲಿ ಅರ್ಜಿ ಆಹ್ವಾನಿಸುವ ಸಾಧ್ಯತೆಯಿದೆ.

ರಾಜ್ಯದಲ್ಲಿ ಏಳು ಸಾವಿರಕ್ಕೂ ಅಧಿಕ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿವೆ. ಈ ಹಿಂದೆ ಯೋಜನೆಯಡಿ ಅರ್ಜಿ ಸಲ್ಲಿಸುವ ನಾಲ್ಕು ಸಾವಿರಕ್ಕೂ ಹೆಚ್ಚು ಸಂಘ–ಸಂಸ್ಥೆಗಳಲ್ಲಿ, ಒಂದು ಸಾವಿರದಿಂದ ಒಂದೂವರೆ ಸಾವಿರ ಸಂಘ–ಸಂಸ್ಥೆಗಳಿಗೆ ವಾರ್ಷಿಕ ಧನಸಹಾಯ ಒದಗಿಸಲಾಗುತ್ತಿತ್ತು. ಹಾಲಿ ಮಾರ್ಗಸೂಚಿ ಪ್ರಕಾರ ಯೋಜನೆಯಡಿ ಗರಿಷ್ಠ ₹5 ಲಕ್ಷದವರೆಗೆ ಅನುದಾನ ಒದಗಿಸಲು ಅವಕಾಶವಿದೆ.

ಸಂಕಷ್ಟಕ್ಕೆ ಸಿಲುಕಿದ್ದ ಸಂಘ–ಸಂಸ್ಥೆ

ಸಾಂಸ್ಕೃತಿಕ ಸಂಘ–ಸಂಸ್ಥೆಗಳಲ್ಲಿ ಹೆಚ್ಚಿನವು ಇಲಾಖೆಯ ಧನಸಹಾಯವನ್ನೇ ನಂಬಿಕೊಂಡು ವರ್ಷಪೂರ್ತಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಅಸಂಘಟಿತ ಕಲಾವಿದರಿಗೆ ವಾದ್ಯ ಪರಿಕರ ಮತ್ತು ವೇಷ ಭೂಷಣಗಳ ಖರೀದಿಗೂ ಈ ಯೋಜನೆ ಸಹಕಾರಿಯಾಗಿದೆ. ಅನುದಾನದ ಕೊರತೆಯಿಂದ ಇಲಾಖೆಯು 2023–24ನೇ ಸಾಲಿನ ಧನಸಹಾಯವನ್ನು ಮೊದಲ ಬಾರಿಗೆ ನಾಲ್ಕು ಕಂತುಗಳಲ್ಲಿ ನೀಡಿತ್ತು. 2024–25ನೇ ಸಾಲಿಗೆ ಯೋಜನೆಯನ್ನೇ ಸ್ಥಗಿತ ಮಾಡಿತ್ತು. ಇದರಿಂದಾಗಿ ಧನಸಹಾಯದ ಭರವಸೆಯಿಂದ ಕಾರ್ಯಕ್ರಮಗಳನ್ನು ಮಾಡಿದ್ದ ಸಂಘ–ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದವು.

ಧನಸಹಾಯ ಯೋಜನೆಯಡಿ ಇನ್ನಷ್ಟು ಪಾರದರ್ಶಕತೆ ತರಲು ಮಾರ್ಗಸೂಚಿಯನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ಇದಕ್ಕೆ ಅನುಮೋದನೆ ದೊರೆತ ಬಳಿಕ ಅರ್ಜಿ ಆಹ್ವಾನಿಸಲಾಗುತ್ತದೆ
– ಗಾಯಿತ್ರಿ ಕೆ.ಎಂ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.