ADVERTISEMENT

ಸಂಸ್ಕೃತಿ ಇಲಾಖೆ ಯೋಜನೆ: ‘ಚೋಖಿ ಧನಿ’ ರೀತಿ ಕಲಾಗ್ರಾಮ ಅಭಿವೃದ್ಧಿ

ಪ್ರವಾಸಿಗರ ಸೆಳೆಯಲು ನಿರಂತರ ಸಾಂಸ್ಕೃತಿಕ ಚಟುವಟಿಕೆ

ವರುಣ ಹೆಗಡೆ
Published 26 ಡಿಸೆಂಬರ್ 2022, 6:25 IST
Last Updated 26 ಡಿಸೆಂಬರ್ 2022, 6:25 IST
ಕಲಾಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುಚ್ಚಯ
ಕಲಾಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುಚ್ಚಯ   

ಬೆಂಗಳೂರು: ರಾಜಸ್ಥಾನದ ‘ಚೋಖಿ ಧನಿ’ ಮಾದರಿಯಲ್ಲಿ, ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಇಲ್ಲಿನ ಮಲ್ಲತ್ತಹಳ್ಳಿಯ ಕಲಾಗ್ರಾಮವನ್ನು ಅಭಿವೃದ್ಧಿಪಡಿಸಲುಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ.

ಮೂಲಸೌಕರ್ಯಗಳ ಕೊರತೆ ಯಿರುವ ಕಲಾಗ್ರಾಮಕ್ಕೆ ಕಾಯಕಲ್ಪ ನೀಡಬೇಕೆಂಬ ಆಗ್ರಹ ಕಲಾವಿದರ ವಲಯದಲ್ಲಿತ್ತು. ಹೀಗಾಗಿ, ಅಲ್ಲಿನಿರಂತರ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಹಾಗೂ ಪ್ರವಾಸಿಗರನ್ನುಸೆಳೆಯಲು ಇಲಾಖೆ ಮುಂದಾಗಿದೆ.

ಈ ಸಂಬಂಧ ಯೋಜನೆಯನ್ನು ರೂಪಿಸಿ, ಅನುಮೋದನೆಗೆ ಮೂಲಸೌಲಭ್ಯ ಇಲಾಖೆಗೆ (ಐಡಿಡಿ) ಕಳುಹಿಸಲಾಗಿದೆ. ವಿವಿಧ ಸಾಂಸ್ಕೃತಿಕ ಚಟುವಟಿಗಳ ಜತೆಗೆ ವಸತಿ, ಆಹಾರ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ, ಥೀಮ್ ಪಾರ್ಕ್ ಸೇರಿ ಹಲವು ವೈವಿಧ್ಯಗಳನ್ನು ಒಂದೇ ಸೂರಿನಡಿ ತರಲಾಗುತ್ತದೆ.

ADVERTISEMENT

ರಾಜಸ್ಥಾನದಲ್ಲಿ ಚೋಖಿ ಧನಿ ಗ್ರಾಮವನ್ನು ಅಭಿವೃದ್ಧಿಪಡಿಸಿರುವಂತೆಯೇ ಕಲಾಗ್ರಾಮವನ್ನೂ ಅಭಿವೃದ್ಧಿಪಡಿಸಲು ಇಲಾಖೆಯು ಚೋಖಿ ಧನಿ ಗ್ರೂಪ್‌ ಅನ್ನು ಸಂಪರ್ಕಿಸಿತ್ತು. ಆದರೆ, ಸಂಸ್ಥೆಯವರು ಒಪ್ಪದ ಕಾರಣ ಸ್ಥಳೀಯ ಖಾಸಗಿ ಸಂಸ್ಥೆಯ ಸಹಯೋಗದಲ್ಲಿಯೇ ಅಭಿವೃದ್ಧಿಪಡಿ ಸಲು ಮುಂದಾಗಿದೆ.

30 ಎಕರೆಯಲ್ಲಿ ವ್ಯಾಪಿಸಿರುವ ಕಲಾಗ್ರಾಮವನ್ನು ಸಂಸ್ಕೃತಿ ಇಲಾಖೆ ನಿರ್ವಹಣೆ ಮಾಡುತ್ತಿದೆ. ಮೂಲಸೌಕರ್ಯ ಇಲ್ಲದ ಕಾರಣಕಲಾಗ್ರಾಮದಲ್ಲಿ ಪ್ರತಿವರ್ಷ ಬೆರಳಣಿಕೆಯ ಕಾರ್ಯಕ್ರಮಗಳಷ್ಟೇನಡೆಯುತ್ತಿವೆ. ಕಲಾವಿದರಿಗೆ ವಸತಿ ಸೌಲಭ್ಯವಿರದ ಕಾರಣ ಕಲಾ ಶಿಬಿರ, ತರಬೇತಿ ಹಾಗೂ ಪ್ರದರ್ಶನ ಗಳಿಗೂ ಸಮಸ್ಯೆಯಾಗಿತ್ತು. 2018ರ ಡಿಸೆಂಬರ್ ತಿಂಗಳಲ್ಲಿ ಶಾರ್ಟ್ ಸರ್ಕಿಟ್‌ನಿಂದ ಅಗ್ನಿ ಅವಘಡ ಸಂಭವಿಸಿದ್ದ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಚಯವು, ಮೂರೂವರೆ ವರ್ಷಗಳ ಬಳಿಕ ಪ್ರದರ್ಶನಗಳಿಗೆ ವೇದಿಕೆ ಒದಗಿಸಿದೆ. ಕಳೆದ ಏಪ್ರಿಲ್‌ ತಿಂಗಳಿಂದ ಅಲ್ಲಿ ಪ್ರದರ್ಶನಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ವಿವಿಧ ಕಚೇರಿ: ಕಲಾಗ್ರಾಮದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ವಿಭಾಗ, ಶಿಲ್ಪಕಲಾ ಅಕಾಡೆಮಿಯ ಗ್ಯಾಲರಿ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ, ನಾಲ್ಕು ಬಯಲು ರಂಗಮಂದಿರಗಳು ಹಾಗೂ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಇವೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ಆಡಳಿತ ಕಚೇರಿ ತಲೆಯೆತ್ತುತ್ತಿದೆ.

‘ಕಲಾಗ್ರಾಮದಲ್ಲಿ ನಾಟಕ, ಯಕ್ಷಗಾನ, ಜಾನಪದ ನೃತ್ಯ, ಸಂಗೀತ ಸೇರಿ ರಾಜ್ಯದ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುತ್ತದೆ. ರಾಜ್ಯದ ವಿವಿಧ ಭಾಗಗಳ ಆಹಾರವೂ ಒಂದೆಡೆ ಸಿಗುವಂತೆ ಮಾಡಲಾಗುವುದು’ ಎಂದು ಇಲಾಖೆಯ ನಿರ್ದೇಶಕ ಪ್ರಕಾಶ್ ಜಿ. ನಿಟ್ಟಾಲಿ ತಿಳಿಸಿದರು.

ಮನರಂಜನೆ ಜತೆಗೆ ಆತಿಥ್ಯ
ರಾಜಸ್ಥಾನದಲ್ಲಿ ಅಭಿವೃದ್ಧಿಪಡಿಸಲಾದ ಚೋಖಿ ಧನಿ ಗ್ರಾಮದಲ್ಲಿ ಸ್ಥಳೀಯ ಪರಂಪರೆ ಮತ್ತು ಸಂಸ್ಕೃತಿಗೆ ಉತ್ತೇಜನ ನೀಡಲಾಗುತ್ತಿದೆ. ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ ಪಡೆದಿದೆ. ಇಲ್ಲಿ ರಾಜಸ್ಥಾನ ಕಲಾ ಪ್ರಕಾರಗಳ ಜತೆಗೆ ಸ್ಥಳೀಯ ಆಹಾರ ಸವಿಯುವ ಅವಕಾಶವು ಇದೆ. ವಿವಿಧ ದರ್ಜೆಯ ಹೋಟೆಲ್‌ಗಳು ಇವೆ. ಸ್ಥಳೀಯ ಕಲಾವಿದರಿಗೆ ಪ್ರದರ್ಶನಗಳನ್ನು ನಡೆಸಲು ಅವಕಾಶ ಒದಗಿಸಲಾಗಿದೆ. ವಿವಿಧ ಕಲಾ ಉತ್ಸವಗಳನ್ನೂ ನಡೆಸಲಾಗುತ್ತಿದೆ.

**

ಕಲಾಗ್ರಾಮವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುತ್ತದೆ. ಪ್ರವಾಸಿಗರನ್ನೂ ಸೆಳೆಯಲು ಕಾರ್ಯಯೋಜನೆ ರೂಪಿಸಲಾಗಿದೆ.
–ಪ್ರಕಾಶ್ ಜಿ. ನಿಟ್ಟಾಲಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.