ಬೆಂಗಳೂರು: ‘ಕಲಾವಿದರಿಗೆ ಭಾಷಾ ಮರ್ಯಾದೆ ಮುಖ್ಯವಾಗಿದ್ದು, ಭಾಷೆ, ಬರವಣಿಗೆ, ಉಚ್ಚಾರವನ್ನು ಕಲಿತು ಮುನ್ನಡೆಯಬೇಕು’ ಎಂದು ಗಾಯಕಿ ಎಚ್.ಆರ್. ಲೀಲಾವತಿ ಅಭಿಮತ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು.
‘ಕಲಾವಿದರು ಹೆಚ್ಚು ಪರಿಶ್ರಮ ವಹಿಸಿ ಸಾಧನೆ ಮಾಡಬೇಕು. ನಾನು ಬಂಗಾಳಿ, ಅಸ್ಸಾಮಿ ಹಾಡುಗಳನ್ನು ಆಕಾಶವಾಣಿ ಕೇಂದ್ರಗಳಲ್ಲಿ ಹಾಡುವಾಗ, ಆ ಹಾಡುಗಳ ಬರವಣಿಗೆಗೂ, ಉಚ್ಚಾರಕ್ಕೂ ವ್ಯತ್ಯಾಸ ಇರುವುದನ್ನು ಅರಿತು, ಮನದಟ್ಟು ಮಾಡಿಕೊಂಡು ಹಾಡಿದೆ. ಪ್ರತಿಯೊಂದು ಸಂಗೀತ ಪ್ರಕಾರಕ್ಕೂ ತನ್ನತನ ಇರುತ್ತದೆ. ಕಲಾವಿದರಿಗೆ ನಂದೇ ಸರಿ ಎಂಬ ಅಹಂ ಇರಬಾರದು’ ಎಂದರು.
‘ಇತ್ತೀಚೆಗೆ ಸಂಗೀತಗಾರರು ಕೇವಲ ನಾಲ್ಕು ಹಾಡುಗಳಿಗೆ ತಮ್ಮ ಸಂಗೀತ ಕಛೇರಿ ಮುಗಿಸುವುದನ್ನೂ ಕಾಣುತ್ತಿದ್ದೇವೆ. ಇದಕ್ಕೆ ಕಲಾವಿದರಲ್ಲಿ ಪರಿಶ್ರಮ ಇಲ್ಲದಿರುವುದೇ ಕಾರಣ’ ಎಂದು ಹೇಳಿದರು.
‘ಭಾವಗೀತೆಯಂತಹ ಹಾಡುಗಳಿಗೆ ಈಗ ವಿಪರೀತ ವಾದ್ಯಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಕವಿ ಸಾಯುತ್ತಾನೆ. ಸಾಹಿತ್ಯ ಅರ್ಥವಾಗದೆ ಕೇವಲ ವಾದ್ಯಗಳನ್ನು ಕೇಳಿಸಿಕೊಳ್ಳುವಂತಾಗಿದೆ. ಇನ್ನು ಕೆಲವೆಡೆ ಪ್ರದರ್ಶನಗಳಲ್ಲಿ ನೃತ್ಯವನ್ನೂ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯತ್ರಿ ಉಪಸ್ಥಿತರಿದ್ದರು.
‘ಆಕಾಶವಾಣಿ ಹಲವು ಕಲಾವಿದರಿಗೆ ಜೀವನ ನೀಡಿದೆ. ಆದರೆ ಆಕಾಶವಾಣಿಯು ಪ್ರಸಾರಭಾರತಿಯಾಗಿ ಬದಲಾದ ಬಳಿಕ ಶೋಚನೀಯ ಸ್ಥಿತಿಯಲ್ಲಿದೆ. ಉದ್ಯೋಗಿಗಳ ನೇಮಕವೂ ಸರಿಯಾಗಿ ಆಗುತ್ತಿಲ್ಲಎಚ್.ಆರ್. ಲೀಲಾವತಿ ಗಾಯಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.