ಬೆಂಗಳೂರು: ‘ಕಾಸರಗೋಡು ಕರ್ನಾಟಕಕ್ಕೆ ಸೇರಿದಾಗ ಮಾತ್ರ ಕಯ್ಯಾರ ಕಿಞ್ಞಣ್ಣ ರೈ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕು’ ಎಂದು ಲೇಖಕಿ ಇಂದಿರಾ ಹೆಗ್ಗಡೆ ಆಗ್ರಹಿಸಿದರು.
ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ವಿಕಾಸ ರಂಗ ಜಂಟಿಯಾಗಿ ಆಯೋಜಿಸಿದ ಕನ್ನಡ ಬಾವುಟ ಹಾರಿಸಿದವರು ನೆನಪಿನ ಮಾಲೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡಿದರು.
‘ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ತಮ್ಮ ಉಸಿರಿರುವವರೆಗೂ ಕಯ್ಯಾರ ಕಿಞ್ಞಣ್ಣ ರೈ ಶ್ರಮಿಸಿದರು. ಬ್ರಿಟಿಷರ ಆಳ್ವಿಕೆ ನಂತರದ ಕಾಲದಲ್ಲೂ ಕಾಸರಗೋಡು ಅಪ್ಪಟ ಕನ್ನಡ ನಾಡಾಗಿತ್ತು. ಕೋರ್ಟ್ ತೀರ್ಪುಗಳು ಕನ್ನಡದಲ್ಲಿ ಬರುತ್ತಿದ್ದವು. ಈಗಲೂ ಅಲ್ಲಿ ನೂರಾರು ಕನ್ನಡ ಶಾಲೆಗಳಿವೆ. ಮಹಾಜನ್ ವರದಿಯಲ್ಲೂ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಹೇಳಲಾಗಿದೆ. ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು’ ಎಂದು ಹೇಳಿದರು.
ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ, ‘ಮಹಾಜನ್ ವರದಿಯು ಕರ್ನಾಟಕಕ್ಕೆ ನೀಡಿರುವ ಕಾಸರಗೋಡನ್ನು ನಮಗೆ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಕೇಳದಿರುವುದು ನಾಚಿಕೆಗೇಡಿನ ಸಂಗತಿ. ಪರಿಷ್ಕೃತ ಡಾ. ಸರೋಜಿನಿ ಮಹಿಷಿ ವರದಿಯ ಜಾರಿಗಾಗಿ ಈಗಾಗಲೇ ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸಿದ್ದು, ವಿಳಂಬ ಮಾಡಿದರೆ ಹಂತ ಹಂತವಾಗಿ ಹೋರಾಟ ರೂಪಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ವಿಕಾಸರಂಗದ ಅಧ್ಯಕ್ಷ ವ.ಚ. ಚನ್ನೇಗೌಡ, ಸಂಶೋಧಕ ಆರ್. ಶೇಷಶಾಸ್ತ್ರಿ, ಬಾ.ಹ. ಉಪೇಂದ್ರ, ಲೇಖಕ ಆನಂದ್ ರಾಮರಾವ್, ರಫಾಯಲ್‌ರಾಜ್, ಗೋವಿಂದಹಳ್ಳಿ ಕೃಷ್ಣೇಗೌಡ, ಎಂ. ಪುಟ್ಟಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.