ADVERTISEMENT

ಶಿಕ್ಷಣದಲ್ಲಿ ಕನ್ನಡ ಅನುಷ್ಠಾನ ಅಗತ್ಯ: ಟಿ.ಎಸ್. ನಾಗಾಭರಣ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗ ಕೇಂದ್ರ ಸಚಿವರ ಭೇಟಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 20:37 IST
Last Updated 22 ಡಿಸೆಂಬರ್ 2021, 20:37 IST
ಟಿ.ಎಸ್. ನಾಗಾಭರಣ
ಟಿ.ಎಸ್. ನಾಗಾಭರಣ   

ಬೆಂಗಳೂರು: ‘ಶಿಕ್ಷಣದಲ್ಲಿ ಭಾಷಾ ಸಮಸ್ಯೆ ದೊಡ್ಡದಾಗಿ ಬೆಳೆಯುತ್ತಿದೆ. ಪೂರ್ಣ ಪ್ರಮಾಣದಲ್ಲಿ ಕನ್ನಡವನ್ನು ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ಅಳವಡಿಸಿಕೊಂಡರೆ ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆಯಾ ರಾಜ್ಯದ ಪ್ರಧಾನ ಭಾಷೆಗೆ ಆದ್ಯತೆ ದೊರೆಯುತ್ತದೆ. ಈ ಬದಲಾವಣೆ ತರುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ತಿಳಿಸಿದರು.

ನವದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಾಧಿಕಾರದ ನಿಯೋಗವು 2 ದಿನಗಳಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ಜಿತೇಂದ್ರ ಸಿಂಗ್, ಕಿಶನ್ರೆಡ್ಡಿ, ಅನುರಾಗ್ ಠಾಕೂರ್ ಹಾಗೂ ಕೆಲವುಸಂಸದರನ್ನು ಭೇಟಿ ಮಾಡಿದೆ. ಭಾಷೆ, ಉದ್ಯೋಗ ಸೇರಿದಂತೆ ರಾಜ್ಯವನ್ನು ಕಾಡುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಅವರ ಜೊತೆಗೆ ಚರ್ಚಿಸಲಾಗಿದೆ. ಸಚಿವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ’ ಎಂದು ತಿಳಿಸಿದರು.

‘ಶಾಸ್ತ್ರೀಯ ಭಾಷೆಗೆ ಸಂಬಂಧಿಸಿದಂತೆ ಆಗಬೇಕಾದ ಕೆಲಸಗಳ ಬಗ್ಗೆ ಮಾನವ ಸಂಪನ್ಮೂಲ ಇಲಾಖೆಗೆ ತಿಳಿಸಲಾಗಿದೆ. ಬ್ಯಾಂಕುಗಳಲ್ಲಿ ಕನ್ನಡ ಬಾರದ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇದರಿಂದ ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಹಕನಿಗೆ ಅವನದೇ ಭಾಷೆಯಲ್ಲಿ ಸೇವೆ ಒದಗಿಸಬೇಕು. ಹೀಗಾಗಿ, ಕೇಂದ್ರ ಸರ್ಕಾರವು ಬ್ಯಾಂಕುಗಳಲ್ಲಿನ ಗ್ರೂಪ್ಎ ಮತ್ತು ಬಿ ಹುದ್ದೆಗಳಿಗೂ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಈ ಬಗ್ಗೆ ಹಕ್ಕೊತ್ತಾಯ ಮಾಡಲಾಗಿದೆ’ ಎಂದರು.

ADVERTISEMENT

‘ಸಾಂವಿಧಾನಿಕವಾಗಿ ಭಾರತೀಯ ಭಾಷೆಗಳು ಸಬಲೀಕರಣಗೊಳ್ಳಬೇಕೆಂಬ ದೃಷ್ಟಿಯಿಂದ ಕಾನೂನು ತಿದ್ದುಪಡಿಗೆ ಕರಡನ್ನು ಸಿದ್ಧಪಡಿಸಿ, ಎಲ್ಲ ಸಂಸದರಿಗೂ ನೀಡಲಾಗಿದೆ. ಈ ಬಗ್ಗೆ ರಾಜ್ಯದ ಸಂಸದರು ಬೇರೆ ರಾಜ್ಯಗಳ ಸಂಸದರೊಂದಿಗೆ ಚರ್ಚಿಸಬೇಕು’ ಎಂದರು.

*
ಜೀವನೋಪಾಯಕ್ಕಾಗಿ ಬೇರೆ ರಾಜ್ಯಕ್ಕೆ ಹೋದಾಗ ಅಲ್ಲಿನ ಭಾಷೆ ಕಲಿತು ಸ್ಥಳೀಯರ ಜೊತೆ ಹೊಂದಿಕೊಳ್ಳಬೇಕು. ಬೆಳಗಾವಿಯಲ್ಲಿ ನೆಲೆಸಿರುವವರು ಕನ್ನಡವನ್ನು ಒಪ್ಪಿಕೊಳ್ಳಬೇಕು.
-ಟಿ.ಎಸ್. ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.