ಕನ್ನಡ
ಬೆಂಗಳೂರು: ‘ಕೇಂದ್ರ ಮತ್ತು ರಾಜ್ಯ ಪಠ್ಯಕ್ರಮದಲ್ಲಿನ ತಾರತಮ್ಯ ಹೋಗಲಾಡಿಸಲು ತುರ್ತಾಗಿ ರಾಜ್ಯ ಪಠ್ಯಕ್ರಮದಿಂದ ತೃತೀಯ ಭಾಷೆ ತೆಗೆದು, ಎರಡು ಭಾಷಾ ಪರೀಕ್ಷೆಗಳನ್ನು ಮಾತ್ರ ಕಡ್ಡಾಯಗೊಳಿಸಬೇಕು’ ಎಂದು ಕನ್ನಡ ಮೊದಲು ಬಳಗ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ‘ಜ್ಞಾನೇಶ್ವರ ಕರ್ನಾಟಕ ಶಿಕ್ಷಣ ಭಾಷಾ ನೀತಿ’ ವರದಿಯ ರೂವಾರಿ ಹಾಗೂ ಬಳಗದ ಸಂಸ್ಥಾಪಕ ಜ್ಞಾನೇಶ್ವರ್ ಎಂ., ವರದಿಯಲ್ಲಿನ ಶಿಫಾರಸುಗಳನ್ನು ಅನುಷ್ಠಾನ ಮಾಡಬೇಕು ಎಂದು ಒತ್ತಾಯಿಸಿದರು.
‘ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮದಲ್ಲಿ ಒಂಬತ್ತು ಮತ್ತು ಹತ್ತನೇ ತರಗತಿಯಲ್ಲಿ ಎರಡೇ ಭಾಷೆಗಳನ್ನು ಕಲಿಸಲಾಗುತ್ತಿದೆ. ರಾಜ್ಯ ಪಠ್ಯಕ್ರಮದಲ್ಲಿ ಮೂರು ಭಾಷೆಗಳಿದ್ದು, ಕಡ್ಡಾಯವಾಗಿ ಮೂರು ಭಾಷಾ ವಿಷಯಗಳಲ್ಲಿ ಉತ್ತೀರ್ಣರಾಗಬೇಕಿದೆ. ತೃತೀಯ ಭಾಷೆಯ ಕಡ್ಡಾಯ ಪರೀಕ್ಷೆ ಮತ್ತು ತೇರ್ಗಡೆಯ ನಿಯಮವನ್ನು ರಾಜ್ಯ ಪಠ್ಯಕ್ರಮದಲ್ಲಿ ಸಡಿಲಿಸಬೇಕು. ಮೂರನೇ ಭಾಷೆಯನ್ನು ಆಯ್ಕೆಯಾಗಿ ನೀಡಬೇಕು’ ಎಂದರು.
‘ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮದಡಿ ವ್ಯಾಸಂಗ ಮಾಡುತ್ತಿರುವವರು ಹೆಚ್ಚಾಗಿ ಶ್ರೀಮಂತರ ಮಕ್ಕಳೇ ಆಗಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ರಾಜ್ಯ ಪಠ್ಯಕ್ರಮದಡಿ ಓದುತ್ತಿದ್ದಾರೆ. ಕೇಂದ್ರ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳು ಐದು ವಿಷಯಗಳಲ್ಲಿ ಪರೀಕ್ಷೆ ಬರೆದರೆ, ರಾಜ್ಯ ಪಠ್ಯಕ್ರಮದಲ್ಲಿ ಆರು ವಿಷಯಗಳಲ್ಲಿ ಪರೀಕ್ಷೆ ಎದುರಿಸಬೇಕಾಗಿದೆ. ಹೆಚ್ಚುವರಿ ಭಾಷೆಯ ಕಲಿಕೆಯ ಒತ್ತಡದಿಂದ ಲಕ್ಷಾಂತರ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಸರ್ಕಾರ ಕೂಡಲೇ ತೃತೀಯ ಭಾಷೆಯನ್ನು ರಾಜ್ಯ ಪಠ್ಯಕ್ರಮದಿಂದ ತೆಗೆಯಬೇಕು’ ಎಂದು ಒತ್ತಾಯಿಸಿದರು.
ನಟ ಚೇತನ್ ಅಹಿಂಸಾ, ‘ಕೇಂದ್ರ ಮತ್ತು ರಾಜ್ಯ ಪಠ್ಯ ಕ್ರಮದಲ್ಲಿನ ತಾರತಮ್ಯಗಳಿಂದ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಂಕಷ್ಟ ಎದುರಾಗುತ್ತಿದೆ. ಉಳ್ಳವರು ಮತ್ತು ದುರ್ಬಲ ವರ್ಗದವರ ಮಕ್ಕಳ ನಡುವಿನ ತಾರತಮ್ಯ ನಿಲ್ಲಿಸಬೇಕು. ಶಿಕ್ಷಣದಲ್ಲಿನ ಅನ್ಯಾಯ ಸರಿಪಡಿಸಬೇಕು’ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ವೀರಸಂಗಯ್ಯ, ಬಳಗದ ಸದಸ್ಯರಾದ ವಸಂತ ಪೂಜಾರಿ, ರಮೇಶ್, ಸಾರಿಕಾ, ಶ್ರೀನಾಥ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.