ADVERTISEMENT

ಜಿಬಿಎದಿಂದ ರಾಜ್ಯೋತ್ಸವ ಪಾದಚಾರಿ ನಡಿಗೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 16:17 IST
Last Updated 1 ನವೆಂಬರ್ 2025, 16:17 IST
‘ರಾಜ್ಯೋತ್ಸವ ಪಾದಚಾರಿ ನಡಿಗೆ – 11ಕೆ’ ಅಭಿಯಾನದಲ್ಲಿ ಎಂ. ಮಹೇಶ್ವರ ರಾವ್‌ ಮತ್ತು ನಾಗರಿಕರು ಭಾಗವಹಿಸಿದ್ದರು
‘ರಾಜ್ಯೋತ್ಸವ ಪಾದಚಾರಿ ನಡಿಗೆ – 11ಕೆ’ ಅಭಿಯಾನದಲ್ಲಿ ಎಂ. ಮಹೇಶ್ವರ ರಾವ್‌ ಮತ್ತು ನಾಗರಿಕರು ಭಾಗವಹಿಸಿದ್ದರು   

ಬೆಂಗಳೂರು: ನಗರದ ಪಾದಚಾರಿ ಮಾರ್ಗಗಳನ್ನು ಸಂಭ್ರಮಿಸಲು ಮತ್ತು ಪಾದಚಾರಿ ಮಾರ್ಗಗಳ ಮಹತ್ವವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ‘ರಾಜ್ಯೋತ್ಸವ ಪಾದಚಾರಿ ನಡಿಗೆ – 11ಕೆ’ ಅಭಿಯಾನವನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಜಿಬಿಎ ಶನಿವಾರ ಹಮ್ಮಿಕೊಂಡಿತ್ತು. 

ಶನಿವಾರ ಬೆಳಿಗ್ಗೆ 7ಕ್ಕೆ ವಿಧಾನಸೌಧದಿಂದ ಪ್ರಾರಂಭವಾದ ಈ ನಡಿಗೆಯಲ್ಲಿ 75ಕ್ಕೂ ಹೆಚ್ಚು ನಾಗರಿಕರು ಪಾಲ್ಗೊಂಡರು.

ವಿಧಾನಸೌಧದಿಂದ ಹೊರಟ ನಡಿಗೆ ಕಬ್ಬನ್ ರಸ್ತೆ ಮೂಲಕ ಪೂರ್ವದತ್ತ ತೆರಳಿ ಹಲಸೂರು ಕೆರೆಯವರೆಗೆ ಸಾಗಿತು. ಅಲ್ಲಿಂದ ಸೇಂಟ್‌ ಜಾನ್ಸ್ ಚರ್ಚ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಮತ್ತು ಇನ್‌ಫೆಂಟ್ರಿ ರಸ್ತೆಯ ಮೂಲಕ ವಿಧಾನಸೌಧ ಬಳಿಗೆ ವಾಪಸ್ ಆಯಿತು. 

ADVERTISEMENT

ಎದುರಾದ ಅಡೆತಡೆಗಳ ಸಂಖ್ಯೆಯ ಆಧಾರದ ಮೇಲೆ ಪಾದಚಾರಿ ಮಾರ್ಗಗಳಿಗೆ ಅಂಕಗಳನ್ನು ನೀಡಿದರು. ಅಡೆತಡೆಗಳಲ್ಲಿ ಕಸ, ಭಗ್ನಾವಶೇಷಗಳು, ಮುರಿದ ಸ್ಲ್ಯಾಬ್‌, ಕಂಬಗಳು, ಬಿದ್ದ ಮರಗಳು ಇತ್ಯಾದಿ ಸೇರಿದ್ದವು.

ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್‌ ಅವರು ಸ್ಥಳಕ್ಕೆ ಭೇಟಿ ನೀಡಿ ‘ರಾಜ್ಯೋತ್ಸವ ಪಾದಚಾರಿ ನಡಿಗೆ’ಯಲ್ಲಿ ಪಾಲ್ಗೊಂಡವರಿಗೆ ಬೆಂಬಲ ಸೂಚಿಸಿದರು.

ವಿದ್ಯಾರ್ಥಿಗಳೊಂದಿಗೆ ಹವಾಮಾನ ಸಂವಾದ

‘ನಗರದ ಎಲ್ಲ ಶಾಲೆಗಳು ಮತ್ತು ಪಿಯು ಕಾಲೇಜುಗಳ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ಕರೆತರುವ ಉದ್ದೇಶದಿಂದ ನ. 7ರಂದು ಬೆಳಿಗ್ಗೆ 9.30ಕ್ಕೆ ಪುರಭವನದಲ್ಲಿ ‘ಮಕ್ಕಳ ಹವಾಮಾನ ಕ್ರಿಯಾ ಸಭೆ – 2025’ ಆಯೋಜಿಸಲಾಗುತ್ತಿದೆ’ ಎಂದು ಎಫ್‌ಇಸಿಸಿ ವಿಶೇಷ ಆಯುಕ್ತೆ ಪ್ರೀತಿ ಗೆಹಲೋತ್‌ ತಿಳಿಸಿದರು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹವಾಮಾನ ಕ್ರಿಯಾ ಕೋಶದ ವತಿಯಿಂದ ನಡೆಯುತ್ತಿರುವ ‘ಮಕ್ಕಳ ಹವಾಮಾನ ಕ್ರಿಯಾ ಸಭೆ’ ಕುರಿತು ಮಾತನಾಡಿದ ಅವರು ‘ಹವಾಮಾನ ಬದಲಾವಣೆಯನ್ನು ಎದುರಿಸಲು ಮಕ್ಕಳ ಪಾತ್ರ ಪ್ರಮುಖ. ನಮ್ಮ ನಗರದ ನಿಜವಾದ ಬಲ ಮಕ್ಕಳು ಮತ್ತು ಯುವಕರು’ ಎಂದು ಹೇಳಿದರು. ‘ಬೆಂಗಳೂರು ಹವಾಮಾನ ಕ್ರಿಯಾ ಯೋಜನೆಯ ಅನ್ವಯವಾಗಿ ಇಂತಹ ಕ್ಲಬ್‌ಗಳನ್ನು ನಗರದ ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲಿ ಸ್ಥಾಪಿಸುವುದು ನಮ್ಮ ಗುರಿಯಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.