ADVERTISEMENT

ಕಚೇರಿಗಳಲ್ಲಿ ಕನ್ನಡ ಧ್ವಜ ಕಡ್ಡಾಯ: ಸಚಿವ ಸಂಪುಟದಲ್ಲಿ ಶೀಘ್ರ ತೀರ್ಮಾನ; ಡಿಕೆಶಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 9:43 IST
Last Updated 1 ನವೆಂಬರ್ 2025, 9:43 IST
   

ಬೆಂಗಳೂರು: ‘ನವೆಂಬರ್ ತಿಂಗಳಲ್ಲಿ ಖಾಸಗಿ‌ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡದ ಧ್ವಜ ಹಾರಿಸುವ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಶಾಲಾ ಮಕ್ಕಳ ಪಥಸಂಚಲನದಲ್ಲಿ ವಂದನೆ ಸ್ವೀಕರಿಸಿ ಹಾಗೂ ಇದಕ್ಕೂ ಮೊದಲು ವಿಧಾನಸೌಧದ ಭುವನೇಶ್ವರಿ ಪ್ರತಿಮೆ ಬಳಿ ಮಾಧ್ಯಮಗಳ ಜತೆ ಮಾತನಾಡಿದರು.

‘ಕರ್ನಾಟಕ ಕೇವಲ ನಾಡಲ್ಲ, ಸಂಸ್ಕೃತಿಯ ಬೀಡು. ಕನ್ನಡ ಕೇವಲ ನುಡಿಯಲ್ಲ, ನಮ್ಮ ಅಂತರಂಗದ ಮಾತು. ಕಲಿತವರಿಗೆ ಅಮೃತ, ನಡೆದವರಿಗೆ ನೆರಳು, ದಾರಿದೀಪ. ಕನ್ನಡ ಎನ್ನುವುದು ಜೀವನದ ವಿಧಾನ. ಇಂತಹ ಕನ್ನಡವನ್ನು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ದಾಳಿಯಿಂದ ನಾವೆಲ್ಲರೂ ಕಾಪಾಡಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ADVERTISEMENT

‘ನಮ್ಮ ರಾಜ್ಯ ಮಾತ್ರ ನಾಡಗೀತೆ, ಕನ್ನಡ ಬಾವುಟ, ಪ್ರತಿಮೆ ಹೊಂದಿದೆ. ದೇಶದ ಯಾವ ರಾಜ್ಯವೂ ಇವುಗಳನ್ನು ಹೊಂದಿಲ್ಲ. ವಿಧಾನಸೌಧದ ಆವರಣದಲ್ಲಿ ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಿದ್ದೇವೆ. ಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಕಡ್ಡಾಯಗೊಳಿಸಿದ್ದೇವೆ. ಬೆಂಗಳೂರಿನಲ್ಲಿರುವ ಉದ್ದಿಮೆಗಳು, ಕಾರ್ಖಾನೆಗಳು, ವಾಣಿಜ್ಯ ಕೇಂದ್ರಗಳಲ್ಲಿ ರಾಜ್ಯೋತ್ಸವ ಆಚರಣೆ ಕಡ್ಡಾಯ ಮಾಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.