
ಬೆಂಗಳೂರು: ‘ವಿದೇಶಿಯರು ಕೂಡ ಕನ್ನಡ ಭಾಷೆಯನ್ನು ಪ್ರೀತಿಯಿಂದ ಪೂಜಿಸುತ್ತಿದ್ದಾರೆ. ಈ ನೆಲದ ಮೇಲೆ ವಾಸಿಸುವ ಪ್ರತಿಯೊಬ್ಬರೂ ಕನ್ನಡವನ್ನು ಮಾತನಾಡುವ ಮತ್ತು ಗೌರವಿಸುವ ಮೂಲಕ ಈ ಭಾಷೆಯನ್ನು ಪೂಜಿಸುವ ಕೆಲಸವಾಗಬೇಕು’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು.
ನಾಗದೇವನಹಳ್ಳಿಯ ಜಿ.ತಿಮ್ಮಯ್ಯ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಮತ್ತು ದಿವಂಗತ ಚಿತ್ರನಟ ಶಂಕರ್‌ನಾಗ್ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
‘ಕನ್ನಡ ಭಾಷೆ ಮತ್ತು ಇಲ್ಲಿನ ಸಂಸ್ಕೃತಿ ಇಡೀ ದೇಶಕ್ಕೆ ಮಾದರಿಯಾಗಿದೆ. ವಿದೇಶಿಯರು ನಮ್ಮ ದೇಶ ಮತ್ತು ರಾಜ್ಯದ ಸಂಸ್ಕೃತಿ, ಕಲೆ ಮತ್ತು ಸಾಹಿತ್ಯವನ್ನು ಮೈಗೂಡಿಸಿಕೊಂಡು, ಕನ್ನಡ ಕಲಿಯಲು ಮುಂದಾಗುತ್ತಿದ್ದಾರೆ’ ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿ.ಎಂ. ಮಾರೇಗೌಡ, ‘ಬಾಲ್ಯದಲ್ಲಿಯೇ ಮಕ್ಕಳಿಗೆ ಕನ್ನಡ ಭಾಷೆ, ನೆಲ, ಜಲ ಮತ್ತು ನಾಡಿನ ಭವ್ಯ ಇತಿಹಾಸವನ್ನು ತಿಳಿಸುವ ಕೆಲಸವಾಗಬೇಕು. ಈ ನೆಲದಲ್ಲಿ ಅನ್ನ, ನೀರು, ಉದ್ಯೋಗ ಕಂಡುಕೊಂಡು ಜೀವನ ನಡೆಸುವ ಅನ್ಯ ಭಾಷಿಕರು, ಕಡ್ಡಾಯವಾಗಿ ಕನ್ನಡ ಕಲಿಯಲು ಮುಂದಾಗಬೇಕು’ ಎಂದರು.
ಶಂಕರ್‌ನಾಗ್ ವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ಎನ್.ಸಿ.ಕುಮಾರ್, ‘ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಮಾನ್ಯತೆ ದೊರಕಿ ಹಲವು ವರ್ಷಗಳು ಕಳೆದಿದ್ದರೂ ಈವರೆಗೂ ಭಾಷಾ ಅಧ್ಯಯನ ಕುರಿತ ಕೆಲಸಗಳನ್ನು ಕೈಗೊಂಡಿಲ್ಲ. ಈ ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ನಾನು ಕನ್ನಡಿಗ ಎಂದು ತಿಳಿದು ಭಾಷೆಯನ್ನು ಉಳಿಸಿ ಬೆಳೆಸಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.