ADVERTISEMENT

ಕನ್ನಡ ಕಲಿಕೆಗೆ ಅನ್ಯಭಾಷಿಕರ ಆಸಕ್ತಿ

ಸಂಘ–ಸಂಸ್ಥೆಗಳಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಂಪರ್ಕ * 36 ಗಂಟೆಗಳ ಕಲಿಕಾ ತರಗತಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 19:46 IST
Last Updated 26 ಜುಲೈ 2024, 19:46 IST
.
.   

ಬೆಂಗಳೂರು: ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಯತ್ನಕ್ಕೆ ನಗರದಲ್ಲಿ ಉತ್ತಮ ಸ್ಪಂದನ ವ್ಯಕ್ತವಾಗಿದ್ದು, ವಿವಿಧ ಸಂಘ–ಸಂಸ್ಥೆಗಳು ಕನ್ನಡ ಕಲಿಕಾ ತರಗತಿಗಳನ್ನು ನಡೆಸಲು ಮುಂದೆ ಬಂದಿವೆ. 

ಖಾಸಗಿ ವಲಯ, ಅಪಾರ್ಟ್‌ಮೆಂಟ್, ವೈದ್ಯಕೀಯ ಕಾಲೇಜುಗಳು ಹಾಗೂ ಇತರ ಸಂಸ್ಥೆಯಲ್ಲಿನ ಅನ್ಯ ಭಾಷಿಕರು ಕನ್ನಡ ಕಲಿತು, ಇಲ್ಲಿಯವರೊಂದಿಗೆ ಸಂವಹನ ನಡೆಸಲು ಪ್ರಾಧಿಕಾರವು ‘ಕನ್ನಡೇತರರಿಗೆ ಕನ್ನಡ ಕಲಿಸುವ ಯೋಜನೆ’ಯನ್ನು ಪ್ರಾರಂಭಿಸಿದೆ. ಇದಕ್ಕಾಗಿ ಸಂವಹನ ಕೇಂದ್ರಿತವಾದ ಹೊಸ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ.

ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಪ್ರಾದೇಶಿಕ ಕಚೇರಿಯಲ್ಲಿ ತರಗತಿಗಳನ್ನು ಪ್ರಾರಂಭ ಮಾಡಲಾಗಿದೆ. ಕನ್ನಡ ಕಲಿಕೆಗೆ ಸಂಬಂಧಿಸಿದಂತೆ ಕ್ರೈಸ್ಟ್ ಕಾಲೇಜು, ಆದಿಚುಂಚನಗಿರಿ ವೈದ್ಯಕೀಯ ಕಾಲೇಜು ಸೇರಿ ವಿವಿಧ ಸಂಸ್ಥೆಗಳು ಪ್ರಾಧಿಕಾರವನ್ನು ಸಂಪರ್ಕಿಸಿದ್ದು, ಕನಿಷ್ಠ 20 ಅಭ್ಯರ್ಥಿಗಳಿದ್ದಲ್ಲಿ ತರಗತಿ ನಡೆಸಲಾಗುತ್ತಿದೆ. ಕಲಿಕೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಾಧಿಕಾರಕ್ಕೆ 180 ಅರ್ಜಿಗಳು ಸಲ್ಲಿಕೆಯಾಗಿವೆ. 

ADVERTISEMENT

ಆರ್‌ಬಿಐನಲ್ಲಿ ಸದ್ಯ 40 ಅಧಿಕಾರಿಗಳು ಕನ್ನಡ ಕಲಿಯುತ್ತಿದ್ದಾರೆ. ಮಲೆಯಾಳಂ ಮಿಷನ್ ಸಹಯೋಗದಲ್ಲಿ 140 ಮಲಯಾಳಿಗಳು, ಕ್ರೈಸ್ಟ್ ಕಾಲೇಜಿನಿಂದ 90 ಅಭ್ಯರ್ಥಿಗಳು ಸೇರಿ ವಿವಿಧ ಸಂಸ್ಥೆಗಳಿಂದ ಕನ್ನಡ ಕಲಿಸಲು ಮನವಿ ಬಂದಿದೆ. ಇವರನ್ನು 20 ಅಥವಾ 30 ಅಭ್ಯರ್ಥಿಗಳ ಗುಂಪು ಮಾಡಿ, ತರಗತಿಗಳನ್ನು ನಡೆಸಲಾಗುತ್ತದೆ.

36 ಗಂಟೆಗಳ ಕಲಿಕೆ: ಕನ್ನಡ ಕಲಿಕೆಗೆ ಸಂಬಂಧಿಸಿದಂತೆ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರ ನೇತೃತ್ವದಲ್ಲಿ ಪ್ರತ್ಯೇಕ ಪಠ್ಯವನ್ನು ಸಿದ್ಧಪಡಿಸಲಾಗಿದ್ದು, 36 ಗಂಟೆಗಳ ತರಗತಿ ನಡೆಸಲಾಗುತ್ತದೆ. ಸಂವಹನಕ್ಕೆ ಸಹಕಾರಿಯಾದ ಸರಳ ಕನ್ನಡದ ಪಠ್ಯ ಇದಾಗಿದೆ. ಸಂಜೆ 6ರಿಂದ 7 ಗಂಟೆಯ ಅವಧಿಯಲ್ಲಿ ತರಗತಿಗಳು ನಡೆಯಲಿವೆ. ಪ್ರಾಧಿಕಾರವು ಐಟಿ–ಬಿಟಿ ಕಂಪನಿಗಳ ಕನ್ನಡ ಸಂಘಗಳನ್ನೂ ಸಂಪರ್ಕಿಸಿ, ಅಲ್ಲಿಯವರಿಗೆ ಕನ್ನಡ ಕಲಿಸಲು ಮುಂದಾಗಿದೆ.

‘ಕನ್ನಡವು ಮುಕ್ತ ಭಾಷೆಯಾಗಿದೆ. ಕಲಿಯುವವರು ಯಾವ ಕ್ಷೇತ್ರದಿಂದ ಬಂದಿದ್ದಾರೆ ಎಂದು ತಿಳಿದು, ಅಲ್ಲಿನ ಉದಾಹರಣೆ ಸಹಿತ ಕನ್ನಡ ಕಲಿಸಲಾಗುತ್ತಿದೆ. ಆರ್‌ಬಿಐ ಅಧಿಕಾರಿಗಳು ಉತ್ತಮವಾಗಿ ಕನ್ನಡ ಕಲಿಯುತ್ತಿದ್ದಾರೆ. ಸೂಕ್ತ ಪರಿಕರ ಹಾಗೂ ಕಲಿಸುವವರು ಇರದಿದ್ದರಿಂದ ಕೆಲವರು ಕನ್ನಡ ಕಲಿಯಲು ಮುಂದಾಗಿರಲಿಲ್ಲ. ಈಗ ಆ ಕೊರತೆಯನ್ನು ನಿವಾರಿಸಲು ಕಾರ್ಯಪ್ರವೃತರಾಗಿದ್ದೇವೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ಪುರುಷೋತ್ತಮ ಬಿಳಿಮಲೆ

ಕನ್ನಡ ಕಲಿಕೆಗೆ ಅನ್ಯಭಾಷಿಕರಿಂದ ಉತ್ತಮ ಸ್ಪಂದನ ವ್ಯಕ್ತವಾಗಿದೆ. ನಮ್ಮಲ್ಲಿನ ಸಂಪನ್ಮೂಲ ಬಳಸಿಕೊಂಡು ಕನ್ನಡ ಕಲಿಸಲಾಗುತ್ತಿದೆ

।ಪುರುಷೋತ್ತಮ ಬಿಳಿಮಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಪ್ರಾಧಿಕಾರದಿಂದಲೇ ಶಿಕ್ಷಕರು

ಕನ್ನಡ ಕಲಿಕೆಗೆ ಸಂಬಂಧಿಸಿದಂತೆ ಪ್ರಾಧಿಕಾರವೇ ಶಿಕ್ಷಕರನ್ನು ಒದಗಿಸಿ ಅವರಿಗೆ ವೇತನವನ್ನೂ ನೀಡಲಿದೆ. 20 ಅಭ್ಯರ್ಥಿಗಳಿಗೆ ಒಬ್ಬರು ಶಿಕ್ಷಕರನ್ನು ಒದಗಿಸಲಾಗುತ್ತಿದೆ. ಸಂಘ–ಸಂಸ್ಥೆಗಳು ತರಗತಿಗಳಿಗೆ ಸ್ಥಳಾವಕಾಶವನ್ನು ಗುರುತಿಸಿ ಕಲಿಕೆಗೆ ಅವಕಾಶ ಮಾಡಿಕೊಡಬೇಕಿದೆ. 36 ಗಂಟೆಗಳ ತರಗತಿಗೆ ₹30 ಸಾವಿರ ಗೌರವ ಸಂಭಾವನೆ ನೀಡಲಾಗುತ್ತದೆ. ವಾರಕ್ಕೆ ಮೂರು ದಿನಗಳು ಮಾತ್ರ ಈ ತರಗತಿಗಳು ಇರಲಿವೆ. ಕನ್ನಡ ಕಲಿಕಾ ಕೇಂದ್ರಗಳನ್ನು ನಡೆಸಲು ಇಚ್ಛಿಸುವವರು ಪ್ರಾಧಿಕಾರದ ಇ–ಮೇಲ್ ವಿಳಾಸ secretary.kanpra@gmail.com ಅಥವಾ chairman.kanpra@gmail.comಗೆ ಸಂಪರ್ಕಿಸಬಹುದು. ವಿವರಕ್ಕೆ ದೂರವಾಣಿ ಸಂಖ್ಯೆ 080 22286773ಕ್ಕೆ ಕರೆ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.