
ಕಡತ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ‘ಶಾಸನಗಳನ್ನೂ ಬರೆದು ಸಮಕಾಲೀನ ಚರಿತ್ರೆ ದಾಖಲಿಸಿದ ಮೊದಲ ಕವಿ ರನ್ನ’ ಎಂದು ಸಾಹಿತಿ ಬಾಳಾಸಾಹೇಬ ಲೋಕಾಪುರ ಹೇಳಿದರು.
ಜೈನ ಮಿಲನ್ ಬೆಂಗಳೂರು ಸೆಂಟ್ರಲ್‌ನಿಂದ ಜಯನಗರದ ಚಕ್ರೇಶ್ವರಿ ಮಹಿಳಾ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜೈನ ಸಾಹಿತ್ಯ ಸಿರಿ ಕಾರ್ಯಕ್ರಮದ ತಿಂಗಳ ಉಪನ್ಯಾಸದಲ್ಲಿ ಮಾತನಾಡಿದರು.
‘ರನ್ನ ಕವಿ ಬರೆದಿರುವ ಸಾಹಸಭೀಮ ವಿಜಯ ಹಾಗೂ ಅಜಿತನಾಥ ಪುರಾಣ ತಿಲಕ ಈ ಎರಡೂ ಕಾವ್ಯಗಳು ಕನ್ನಡ ಸಾಹಿತ್ಯದಲ್ಲಿ ಬಹು ಪ್ರಮುಖವಾಗಿ ಗಮನ ಸೆಳೆಯುವ ಕೃತಿಗಳು. ಜಗತ್ತಿನ ಕ್ರೌರ್ಯವನ್ನು ಕೊನೆಗೊಳಿಸಲು ರನ್ನನ ಎರಡೂ ಕಾವ್ಯಗಳು ಕೆಲಸ ಮಾಡುತ್ತವೆ’ ಎಂದು ತಿಳಿಸಿದರು.
‘ಜೈನಧರ್ಮದ ಕೈಪಿಡಿಯಾದ ಅಜಿತನಾಥ ಪುರಾಣದಲ್ಲಿ ರನ್ನ ದಾಖಲಿಸುವ ಪಂಚಕಲ್ಯಾಣಗಳನ್ನು ಹಾಗೂ ಅಭಿಷೇಕಗಳನ್ನು ಇಂದಿಗೂ ಧಾರ್ಮಿಕ ಕ್ರಿಯೆಯಾಗಿ ಜೈನರು ಆಚರಿಸುತ್ತಿದ್ದಾರೆ. ಅಂತಹ ಪ್ರಥಮಗಳನ್ನು ನೀಡಿದ ಮಹತ್ವದ ಕವಿ ಚಕ್ರವರ್ತಿ ರನ್ನ’ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಮಾತನಾಡಿ, ‘ಜೈನಧರ್ಮ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಬಹು ದೊಡ್ಡದು. ಅಹಿಂಸೆಯನ್ನು ಬಹು ದೊಡ್ಡಮಟ್ಟದಲ್ಲಿ ಆಚರಿಸುತ್ತಿರುವ ಧರ್ಮವಿದು. ಈ ಜಗತ್ತಿಗೆ ಅಹಿಂಸೆ ಇಂದು ಅತ್ಯಂತ ಮುಖ್ಯವಾದದ್ದು’ ಎಂದರು.
ಜೈನ್ ಮಿಲನ್ ಸೆಂಟ್ರಲ್ ಘಟಕದ ಅಧ್ಯಕ್ಷೆ ಮಮತಾ ಕಾಂತರಾಜ್, ಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ನಾಗಶ್ರೀ ಮುಪ್ಪಾನೆ, ಜೈನ ಸಾಹಿತ್ಯ ಸಿರಿ ಸಂಚಾಲಕಿ ಪದ್ಮಿನಿ ನಾಗರಾಜು, ದೀಪಾಂಜಲಿ ಗೌರಾಜ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.