ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಶಿ ಅವರನ್ನು ಪದಚ್ಯುತಿಗೊಳಿಸಿ, ಆಡಳಿತಾಧಿಕಾರಿ ನೇಮಿಸಲು ಸರ್ಕಾರಕ್ಕೆ ಒತ್ತಾಯಿಸುವುದು ಸೇರಿ ಏಳು ನಿರ್ಣಯಗಳನ್ನು ಸಮಾನ ಮನಸ್ಕರ ಸಭೆ ಕೈಗೊಂಡಿದೆ.
ಕಸಾಪ ಬೈ–ಲಾ ತಿದ್ದುಪಡಿ ಖಂಡಿಸಿ ನಗರದಲ್ಲಿ ಗುರುವಾರ ಹಮ್ಮಿಕೊಳ್ಳಲಾದ ಸಭೆಯಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ಪಾಲ್ಗೊಂಡಿದ್ದರು. ಕೆ.ಮರುಳಸಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಎಸ್.ಜಿ. ಸಿದ್ಧರಾಮಯ್ಯ, ಬಂಜಗೆರೆ ಜಯಪ್ರಕಾಶ್, ಜಾಣಗೆರೆ ವೆಂಕಟರಾಮಯ್ಯ, ಮಾವಳ್ಳಿ ಶಂಕರ್, ಕೆ.ಎಸ್. ವಿಮಲಾ, ಸಿ.ಕೆ. ರಾಮೇಗೌಡ, ಜಯಪ್ರಕಾಶ್ ಗೌಡ, ಶ್ರೀನಿವಾಸ ಜಿ. ಕಪ್ಪಣ್ಣ, ಸುನಂದಾ ಜಯರಾಮ್, ಡಾ. ವಸುಂಧರಾ ಭೂಪತಿ, ಕೆ.ಟಿ.ಶ್ರೀಕಂಠೇಗೌಡ ಮೊದಲಾದವರು ಅಭಿಪ್ರಾಯ ವ್ಯಕ್ತಪಡಿಸಿದರು.
‘ಕಸಾಪದ ಆರ್ಥಿಕ ಅಶಿಸ್ತನ್ನು ಪ್ರಶ್ನಿಸಿ, ಪರಿಷತ್ತಿನ ಅಧ್ಯಕ್ಷರನ್ನು ಸರ್ಕಾರ ವಿಚಾರಣೆಗೆ ಒಳಪಡಿಸಬೇಕು. ವಿಚಾರಣೆ ಪೂರ್ಣಗೊಳ್ಳುವವರೆಗೂ ಮಹೇಶ ಜೋಶಿ ಅವರ ಅಧ್ಯಕ್ಷಗಿರಿ ಅಮಾನತು ಮಾಡಬೇಕು. ಆ ಸ್ಥಾನಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಬೇಕು. ಹಿಂದಿನ ಸರ್ಕಾರ ಪರಿಷತ್ತಿನ ಅಧ್ಯಕ್ಷರಿಗೆ ನೀಡಿರುವ ರಾಜ್ಯ ಸಚಿವ ದರ್ಜೆಯ ಸ್ಥಾನಮಾನವನ್ನು ತಕ್ಷಣ ಹಿಂಪಡೆಯಬೇಕು’ ಎಂಬ ಆಗ್ರಹ ವ್ಯಕ್ತವಾಯಿತು.
ಅಧ್ಯಕ್ಷರ ಅವಧಿ ಇಳಿಸಿ: ‘ಪರಿಷತ್ತಿನ ಅಧ್ಯಕ್ಷರ ಅಧಿಕಾರಾವಧಿಯನ್ನು ಐದರಿಂದ ಮೂರು ವರ್ಷಗಳಿಗೆ ಇಳಿಸಬೇಕು. ಕಸಾಪ ಹಾಲಿ ಕಾರ್ಯಕಾರಿ ಸಮಿತಿ ಅವಧಿಯಲ್ಲಿ ಈ ಹಿಂದೆ ಎರಡು ಬಾರಿ ಬೈ–ಲಾ ತಿದ್ದುಪಡಿ ಮಾಡಲಾಗಿದ್ದು, ಅದನ್ನು ರದ್ದುಗೊಳಿಸಬೇಕು. ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಬೇಕು. ಸದಸ್ಯರ ಅಮಾನತು ಆದೇಶವನ್ನು ವಾಪಸ್ ಪಡೆಯಬೇಕು. ಬಳ್ಳಾರಿಯಲ್ಲಿ ಜರುಗುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹40 ಕೋಟಿ ಅನುದಾನ ನೀಡದಂತೆ ಸರ್ಕಾರವನ್ನು ಒತ್ತಾಯಿಸಬೇಕು’ ಎಂದು ಸಭೆಯಲ್ಲಿ ಒಕ್ಕೊರಲಿನ ನಿರ್ಧಾರ ಕೈಗೊಳ್ಳಲಾಯಿತು.
ಕೆ.ಮರುಳಸಿದ್ದಪ್ಪ ಮಾತನಾಡಿ, ‘ಸಾಹಿತ್ಯದ ಗಂಧ, ಗಾಳಿ ಗೊತ್ತಿಲ್ಲದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಆರಿಸಿದ್ದೇವೆ. ಅಧ್ಯಕ್ಷರ ಸರ್ವಾಧಿಕಾರಿ ಧೋರಣೆಯನ್ನು ತಡೆಯಲು ಪರಿಷತ್ತಿನ ಚುನಾವಣಾ ಪ್ರಕ್ರಿಯೆಯನ್ನು ಬದಲಾಯಿಸಬೇಕು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ, ಆಯ್ಕೆಯಾದ ಜಿಲ್ಲಾ ಘಟಕದ ಅಧ್ಯಕ್ಷರೇ ರಾಜ್ಯ ಘಟಕದ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ಆಗಬೇಕು’ ಎಂದರು.
‘ಸಾಹಿತ್ಯ ಪರಿಷತ್ತಿನಲ್ಲಿ ಸಂಭವಿಸುತ್ತಿರುವ ಅನ್ಯಾಯಕ್ಕೆ ಕೋರ್ಟ್‌ಗಳಲ್ಲಿ ನ್ಯಾಯ ಸಿಗುವುದು ತಡವಾಗಬಹುದಾದ ಕಾರಣ, ಜನ ಚಳವಳಿ ಸದ್ಯ ನಮ್ಮ ಮುಂದಿರುವ ಹಾದಿ. ಪರಿಷತ್ತಿನ ಇಂದಿನ ಸ್ಥಿತಿ ರಾಜ್ಯದ ಪ್ರತಿ ಪ್ರಜೆಗೂ ತಲುಪುವಂತೆ ಚಳವಳಿ ರೂಪಿಸಬೇಕು’ ಎಂದು ಒತ್ತಾಯಿಸಿದರು.
ಕಸಾಪ ಜಿಲ್ಲಾ ಘಟಕಗಳ ಅಧ್ಯಕ್ಷರ ಮೇಲೆ ರಾಜ್ಯ ಘಟಕದ ಅಧ್ಯಕ್ಷರಿಂದ ಪ್ರಹಾರವಾಗುತ್ತಿದೆ. ಅಧ್ಯಕ್ಷ ಸ್ಥಾನದ ಗೌರವ ಕಳೆಯುತ್ತಿದ್ದರೂ ಸರ್ಕಾರ ಮತ್ತು ಸಾಂಸ್ಕೃತಿಕ ವಲಯ ಸುಮ್ಮನಿರುವುದುವಿಪರ್ಯಾಸ ಎಸ್.ಜಿ.ಸಿದ್ಧರಾಮಯ್ಯ ಸಾಹಿತಿ
ಪರಿಷತ್ತನ್ನು ಕಟ್ಟಿ ಬೆಳೆಸುವ ಬದಲು ಕಟ್ಟಿ ಹಾಕುವ ಕೆಲಸ ಆಗುತ್ತಿದೆ. ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ ವಿರುದ್ಧ ಜನಾಂದೋಲನ ರೂಪಿಸಬೇಕಾದ ಅಗತ್ಯವಿದೆಬಂಜಗೆರೆ ಜಯಪ್ರಕಾಶ್ ಸಾಹಿತಿ
ಗಡಿ ನಾಡು ಭಾಷೆಗೆ ಆಪತ್ತು ಬಂದಾಗ ಪರಿಷತ್ತಿನ ಹಾಲಿ ಅಧ್ಯಕ್ಷರು ಧ್ವನಿ ಎತ್ತಿದ ನಿದರ್ಶನವಿಲ್ಲ. ಇಷ್ಟೆಲ್ಲಾ ವಿರೋಧದ ನಡುವೆ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಹಣ ನೀಡಬಾರದುಜಯಪ್ರಕಾಶ್ ಗೌಡ ಕರ್ನಾಟಕ ಸಂಘದ ಅಧ್ಯಕ್ಷ ಮಂಡ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.