ADVERTISEMENT

ಆಧ್ಯಾತ್ಮಿಕತೆಯ ವಿಸ್ತಾರ ನೀಡಿದ ಸಾಹಿತಿ ಗುರುಲಿಂಗ ಕಾಪಸೆ: ಮಹೇಶ ಜೋಶಿ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 15:10 IST
Last Updated 28 ಮಾರ್ಚ್ 2024, 15:10 IST
ಗುರುಲಿಂಗ ಕಾಪಸೆ ಅವರ ಭಾವಚಿತ್ರಕ್ಕೆ ಮಹೇಶ ಜೋಶಿ ಪುಷ್ಪ ನಮನ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ ಪಾಂಡು ಪಾಲ್ಗೊಂಡಿದ್ದರು.
ಗುರುಲಿಂಗ ಕಾಪಸೆ ಅವರ ಭಾವಚಿತ್ರಕ್ಕೆ ಮಹೇಶ ಜೋಶಿ ಪುಷ್ಪ ನಮನ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ ಪಾಂಡು ಪಾಲ್ಗೊಂಡಿದ್ದರು.   

ಬೆಂಗಳೂರು: ‘ಸಾಹಿತಿ ಗುರುಲಿಂಗ ಕಾಪಸೆ ಅವರು ಕನ್ನಡ ಸಾಹಿತ್ಯಕ್ಕೆ ಆಧ್ಯಾತ್ಮಿಕತೆಯ ವಿಸ್ತಾರ ನೀಡಿದ್ದರು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು.

ಕಸಾಪ ನಗರದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಕಾಪಸೆ ಅವರು ಕನ್ನಡ ಸಾಹಿತ್ಯದ ಸೀಮೆಯನ್ನು ಗಮನಾರ್ಹವಾಗಿ ವಿಸ್ತರಿಸಿದರು. ಮಧುರ ಚೆನ್ನ ಮತ್ತು ಅರವಿಂದರ ಕುರಿತು ಅಧಿಕೃತವಾಗಿ ಮಾತನಾಡ ಬಲ್ಲವರಾಗಿದ್ದ ಅವರು, ಅಧ್ಯಾತ್ಮದ ಹಿರಿಮೆಯನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದ ಅವರು, ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ, ಅವರು ದೊಡ್ಡ ಪ್ರಮಾಣದ ಸಾಧನೆ ಮಾಡಲು ಕಾರಣರಾದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

‘ಕಾಪಸೆ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅವಧಿಯಲ್ಲಿಯೂ ಹಲವಾರು ವಿಶಿಷ್ಟ ಯೋಜನೆಗಳನ್ನು ರೂಪಿಸಿದ್ದರು. ಅವರು ಮೂರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ವಿವಿಧ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದರು’ ಎಂದು ಸ್ಮರಿಸಿಕೊಂಡರು. 

ADVERTISEMENT

ಕಸಾಪ ಪ್ರಕಟಣಾ ವಿಭಾಗದ ಸಂಚಾಲಕ ಎನ್.ಎಸ್.ಶ್ರೀಧರಮೂರ್ತಿ, ‘ಗುರುಲಿಂಗ ಕಾಪಸೆ ಅವರು ಜಾನಪದ, ಅನುವಾದ, ಸಂಪಾದನೆ ಮತ್ತಿತರ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅಪಾರ. ಅವರು ಸಂಪಾದಿಸಿದ ಮಧುರ ಚೆನ್ನರ ಸಂಪುಟ ನಮಗೆಲ್ಲಾ ಮಧುರ ಚೆನ್ನರ ಕಾವ್ಯದ ವಿಸ್ತಾರವನ್ನು ತಿಳಿಸಿಕೊಟ್ಟಿತು. ‘ಬೇಂದ್ರೆ-ಮಧುರ ಚೆನ್ನ ಸಖ್ಯಯೋಗ’ ಕೃತಿ ಕೂಡ ಬಹಳ ಮಹತ್ವದ್ದಾಗಿದೆ. ಗಹನವಾದ ವಿಷಯಗಳನ್ನು ಮಕ್ಕಳಿಗೆ ಅರ್ಥವಾಗುವಂತೆ ಬರೆದಿರುವುದು ಅವರ ವಿಶೇಷ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.