
ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಶಿ ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಆಡಳಿತಾಧಿಕಾರಿ ನಿಷ್ಪಕ್ಷಪಾತ ತನಿಖೆ ನಡೆಸಿ, ವಾಸ್ತವವನ್ನು ಬಯಲಿಗೆಳೆಯಬೇಕು’ ಎಂದು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪ್ರಕಾಶಮೂರ್ತಿ ಆಗ್ರಹಿಸಿದ್ದಾರೆ.
‘ಕನ್ನಡಿಗರ ತೆರಿಗೆ ಹಣದ ಅನುದಾನವನ್ನು ಮನಸೋಇಚ್ಛೆ ದುರ್ಬಳಕೆ ಮಾಡಿಕೊಂಡಿದ್ದ ಮಹೇಶ ಜೋಶಿ ಅವರು, ಪರಿಷತ್ತಿನಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ. ಅಲ್ಲದೆ, ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಂಡಿದ್ದಾರೆ. ಸಂವಿಧಾನಬಾಹಿರವಾಗಿ ಪರಿಷತ್ತಿನ ಬೈಲಾ ತಿದ್ದುಪಡಿ ಮಾಡಿ, ದುರಾಡಳಿತ ನಡೆಸಿದ್ದಾರೆ. ಸಿಬ್ಬಂದಿ ವೇತನ ಹಾಗೂ ಸಮ್ಮೇಳನಕ್ಕೆ ನೀಡಿದ್ದ ಕೋಟ್ಯಂತರ ರೂಪಾಯಿ ಅನುದಾನವನ್ನು ನಿಯಮಬಾಹಿರವಾಗಿ ಬಳಸಿ, ದುಂದುವೆಚ್ಚ ಮಾಡಿದ್ದಾರೆ’ ಎಂದು ದೂರಿದ್ದಾರೆ.
‘ಅವರ ಕಾರ್ಯವೈಖರಿ ಪ್ರಶ್ನಿಸಿದ್ದ ನನಗೆ ಮತ್ತು ಕೆಲ ಜಿಲ್ಲಾಧ್ಯಕ್ಷರಿಗೆ ಕಿರುಕುಳ ನೀಡಿದ್ದರು. ಕನ್ನಡದ ಕೆಲಸಗಳಿಗೆ ಅಡ್ಡಿ ಉಂಟುಮಾಡಿ, ಕಾನೂನಿನ ಬೆದರಿಕೆಗಳನ್ನು ಒಡ್ಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತನ್ನು ಕಾನೂನು ತಾಣದ ಪರಿಷತ್ತನ್ನಾಗಿ ಮಾಡಿದ್ದಾರೆ’ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.