ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ ‘ಡಾ.ಮಳಲಿ ವಸಂತ ಕುಮಾರ್ ಪ್ರಶಸ್ತಿ’ಗೆ ವಿಮರ್ಶಕ ಸಿ.ನಾಗಣ್ಣ ಅವರು ಆಯ್ಕೆಯಾಗಿದ್ದಾರೆ.
ಕಸಾಪ ಅಧ್ಯಕ್ಷ ಮಹೇಶ ಜೋಶಿ ನೇತೃತ್ವದ ಸಮಿತಿ ಈ ಆಯ್ಕೆ ಮಾಡಿದೆ. ಬರಹಗಾರ ಮಳಲಿ ವಸಂತ ಕುಮಾರ್ ಅವರು ‘ಮನುಕುಲದ ವಾಗ್ಮಿ’ ಎಂದು ಹೆಸರು ಪಡೆದಿದ್ದರು. ಕನ್ನಡ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಬರಹಗಾರರಿಗೆ ಪ್ರೋತ್ಸಾಹ ನೀಡಿದ ಅವರು, 46 ಕೃತಿಗಳನ್ನು ರಚಿಸಿದ್ದರು. ಅವರ ನೆನಪಿನಲ್ಲಿ ಕುಟುಂಬದವರು ದತ್ತಿ ನಿಧಿಯನ್ನು ಸ್ಥಾಪಿಸಿದ್ದು, ಕನ್ನಡಕ್ಕೆ ಮಹತ್ವದ ಕೊಡುಗೆ ನೀಡಿದ ಬರಹಗಾರರಿಗೆ ಮತ್ತು ಕನ್ನಡ ಪರ ಹೋರಾಟಗಾರರಿಗೆ ಈ ಪುರಸ್ಕಾರ ನೀಡುವುದು ದತ್ತಿ ದಾನಿಗಳ ಆಶಯವಾಗಿದೆ.
ಸಿ.ನಾಗಣ್ಣ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಭಾಷಾಂತರ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ ಎಂದು ಕಸಾಪ ಮಾಧ್ಯಮ ವಿಭಾಗದ ಸಂಚಾಲಕ ಎನ್.ಎಸ್.ಶ್ರೀಧರ ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.