
ರಾಜರಾಜೇಶ್ವರಿನಗರ: ಉಲ್ಲಾಳು ಬಳಿಯ ವಿನಾಯಕ ಬಡಾವಣೆಯ ಮೂರನೇ ಹಂತದಲ್ಲಿ ನಿರ್ಮಿಸಿದ ಕನ್ನಡದ ಕಟ್ಟೆಯನ್ನು ಧ್ವಂಸ ಮಾಡಿರುವ ಕನ್ನಡ ವಿರೋಧಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ವಿನಾಯಕ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ, ಜೈ ಭುವನೇಶ್ವರಿ ವೇದಿಕೆ, ಕರ್ನಾಟಕದ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಿನಾಯಕ ಬಡಾವಣೆಯ ಮೂರನೇ ಹಂತದ ಮುಖ್ಯ ರಸ್ತೆಯ ವೃತದಲ್ಲಿ 2016ರಲ್ಲಿ ಕನ್ನಡದ ಕಟ್ಟೆಯನ್ನು ಪಾದಚಾರಿ ಮಾರ್ಗದಲ್ಲಿ ನಿರ್ಮಾಣ ಮಾಡಲಾಗಿತ್ತು. ಅದೇ ಜಾಗದಲ್ಲಿ ಕನ್ನಡದ ಧ್ವಜ ಸ್ತಂಭವನ್ನು ನಿರ್ಮಿಸಲಾಗಿತ್ತು. ಎದುರಿನ ಕಟ್ಟಡದ ಮಾಲೀಕ ಹರೀಶ್ ರಾತ್ರೋರಾತ್ರಿ ಕಟ್ಟೆಯನ್ನು ಧ್ವಂಸ ಮಾಡಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರು ಐದು ಬಳದ ಐದು ದಿನಗಳ ಹಿಂದೆ ಪ್ರವಾಸಕ್ಕೆ ಹೋಗಿದ್ದಾಗ ವಿಷಯ ತಿಳಿದು ಕಟ್ಟೆಯನ್ನು ಒಡೆದು ಹಾಕಲಾಗಿದೆ. ಕಟ್ಟೆಯಲ್ಲಿ ಹಿರಿಯ ಸಾಹಿತಿಗಳು, ಜ್ಞಾನಪೀಠ ಪ್ರಶಸ್ತಿ ವಿಜೇತರು, ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಪುನೀತ್ ರಾಜಕುಮಾರ್, ಬಸವಣ್ಣ, ಅಂಬೇಡ್ಕರ್, ಕುವೆಂಪು ಅವರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು. ಅವುಗಳನ್ನು ಕಿತ್ತು ಹಾಕಲಾಗಿದೆ. ಕನ್ನಡದ ವಿರೋಧಿ, ಪರಭಾಷಿಕ ಆರೋಪಿಯನ್ನು ಗಡಿಪಾರು ಮಾಡಬೇಕು. ಕಟ್ಟಡವನ್ನು ಮುಟ್ಟುಗೋಲು ಹಾಕಿಕೊಂಡು, ಜಿಬಿಎ ವಶಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಕಾರ್ಯಕರ್ತ ಪಿ.ಎಸ್. ಕರುಣಾಕರ್ ನಾಯಕ್ ವಿವಿಧ ಸಂಘಟನೆಗಳ ಮುಖಂಡರಾದ ಮಂಜುನಾಥ್, ಶೇಖರ್, ಎ.ಎಂ. ಹರೀಶ್, ಮನು ಗೌಡ, ಬೆಂಗಳೂರು ನಗರ ಜಿಲ್ಲಾ ಕರವೇ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ಗೌಡ, ರಾಜೇಶ್ವರಿನಗರ ಘಟಕದ ಅಧ್ಯಕ್ಷ ಶಿವಣ್ಣ ಭಾಗವಹಿಸಿದ್ದರು.
ಶಾಸಕ ಎಸ್.ಟಿ. ಸೋಮಶೇಖರ್ ಸ್ಥಳಕ್ಕೆ ಭೇಟಿ ನೀಡಿದರು. ಕನ್ನಡದ ಕಟ್ಟೆಯನ್ನು ಒಡೆದು ಹಾಕಿರುವವರನ್ನು ಬಂಧಿಸಲು ಜ್ಞಾನಭಾರತಿ ಠಾಣೆಯ ವೃತ್ತ ನಿರೀಕ್ಷಕರಿಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.