ADVERTISEMENT

ಕಾನ್ಷಿರಾಮ್‌ನಗರ ಜನರ 13 ವರ್ಷಗಳ ಕನಸು ನನಸು

ಪಾಲಿಕೆ ವ್ಯಾಪ್ತಿಗೆ ಸೇರಿದ ನಾಲ್ಕು ಬಡಾವಣೆಗಳು; ಸಚಿವ ಸಂಪುಟ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 19:59 IST
Last Updated 27 ನವೆಂಬರ್ 2020, 19:59 IST
ಅಭಿವೃದ್ಧಿ ಕಾಣದ ಕಾನ್ಷಿರಾಮ್‌ನಗರ ಬಡಾವಣೆ ರಸ್ತೆ
ಅಭಿವೃದ್ಧಿ ಕಾಣದ ಕಾನ್ಷಿರಾಮ್‌ನಗರ ಬಡಾವಣೆ ರಸ್ತೆ   

ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾನ್ಷಿರಾಮ್‌ನಗರ, ಲಕ್ಷ್ಮೀಪುರ, ಮಲ್ಲಸಂದ್ರ ಹಾಗೂ ಉತ್ತರಹಳ್ಳಿ ಮನವರ್ತೆ ಕಾವಲ್‌ ಗ್ರಾಮದ ಬಡಾವಣೆಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಸ್ಥಳೀಯರ ಹಲವು ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ.

ಸೋಮಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಕಾನ್ಷೀರಾಮ್ ಬಡಾವಣೆ ಮತ್ತು ಲಕ್ಷ್ಮೀಪುರ ಗ್ರಾಮದ ಜನರು 13 ವರ್ಷಗಳಿಂದ ಹೋರಾಟ ನಡೆಸಿದ್ದರು. ಪಾಲಿಕೆ ಸೇರುವ ಅವರ ಕನಸು ಸಾಕಾರಗೊಂಡಿದೆ.

ಬಿಬಿಎಂಪಿ ವ್ಯಾಪ್ತಿಗೆ 2007ರಲ್ಲಿ 7 ನಗರಸಭೆ, ಒಂದು ಪ‍ಟ್ಟಣ ಪಂಚಾಯಿತಿ ಮತ್ತು 110 ಹಳ್ಳಿಗಳು ಸೇರ್ಪಡೆಯಾದವು. ಆ ಪಟ್ಟಿಯಲ್ಲಿ ಕಾನ್ಷಿರಾಮ್ ನಗರವೂ ಇತ್ತು. ಆಸ್ತಿ ವಹಿ ಮತ್ತು ಇನ್ನಿತರ ದಾಖಲೆಗಳು ಗ್ರಾಮ ಪಂಚಾಯಿತಿಯಿಂದ ಪಾಲಿಕೆಗೆ ಹಸ್ತಾಂತರವಾಗದ ತಾಂತ್ರಿಕ ಕಾರಣಕ್ಕೆ ಸೇರ್ಪಡೆ ವಿಳಂಬವಾಯಿತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ 2015ರ ಆಗಸ್ಟ್‌ 31ರಲ್ಲಿ ಈ ಬಡಾವಣೆಗಳು ಪಾಲಿಕೆಯ 11ನೇ ವಾರ್ಡ್‌ (ಕುವೆಂಪುನಗರ) ವ್ಯಾಪ್ತಿಗೆ ಸೇರ್ಪಡೆಗೊಂಡವು.

ADVERTISEMENT

ಆದರೆ, ಈ ವಿಂಗಡಣೆ ಅವೈಜ್ಞಾನಿಕವಾಗಿ ಆದ ಕಾರಣ ಹಲವು ತಾಂತ್ರಿಕ ಸಮಸ್ಯೆಗಳು ಎದುರಾದವು. ಕಾನ್ಷಿರಾಮ್‌ನಗರವು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದರೆ, 11ನೇ ವಾರ್ಡ್‌ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ. ದಾಸರಹಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿರುವ 12ನೇ ವಾರ್ಡ್‌ಗೆ (ಶೆಟ್ಟಿಹಳ್ಳಿ) ಹೊಂದಿಕೊಂಡಂತೆ ಇರುವ ಈ ಬಡಾವಣೆಗಳನ್ನು 11ನೇ ವಾರ್ಡ್‌ಗೆ ಸೇರ್ಪಡೆ ಮಾಡಿದ್ದೇ ಈ ತೊಡಕುಗಳಿಗೆ ಕಾರಣವಾತಿತು. ಈ ತೊಡಕು ನಿವಾರಣೆಯಾಗಲು ನಿವಾಸಿಗಳು ಐದು ವರ್ಷ ಕಾಯಬೇಕಾಯಿತು. ಬಿಬಿಎಂಪಿ ವ್ಯಾಪ್ತಿಗೆ ಈ ಬಡಾವಣೆಗಳನ್ನು ಸೇರಿಸಬೇಕು ಎಂದು ಆಗ್ರಹಿಸಿ ದಾಸರಹಳ್ಳಿ ಶಾಸಕ ಆರ್‌.ಮಂಜುನಾಥ್‌ ಅವರು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.

ವಿಧಾನಸೌಧದಿಂದ 13 ಕಿಲೋ ಮೀಟರ್ ದೂರದಲ್ಲಿರುವ ಈ ಬಡಾವಣೆಗಳು ನಗರದ ರೂಪದಲ್ಲಿದ್ದರೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಕಾರಣ ಮೂಲಸೌಕರ್ಯದಿಂದ ವಂಚಿತವಾಗಿದ್ದವು.

ಹೋರಾಟದ ಫಲ: ಮಾರಸಂದ್ರ ಮುನಿಯಪ್ಪ
‘ಅಧಿಕಾರಿಗಳ ಮಾಡಿದ ತಾಂತ್ರಿಕ ತಪ್ಪಿನಿಂದಾಗಿ ಕಾನ್ಷಿರಾಮ್ ನಗರ ಮತ್ತು ಲಕ್ಷ್ಮಿಪುರದ ಬಡಾವಣೆಗಳು ಪಾಲಿಕೆ ಸೇರಲು ಇಷ್ಟು ವರ್ಷ ಕಾಯಬೇಕಾಯಿತು. ಬಹುಜನ ಸಮಾಜ ಪಕ್ಷದ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ’ ಎಂದು ಬಿಎಸ್‌ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಹೇಳಿದರು.

‘ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಎಸ್‌.ಟಿ. ಸೋಮಶೇಖರ್, ವಿ.ಸೋಮಣ್ಣ ಅವರು ನೀಡಿದ ಸಹಕಾರದಿಂದ ಬಡಾವಣೆಗಳ ಜನರ ಕನಸು ಈಡೇರಿತು. ವಿಶೇಷವಾಗಿ ‘ಪ್ರಜಾವಾಣಿ’ ನ.2ರಂದು ಪ್ರಕಟಿಸಿದ ವಿಸ್ತೃತ ವರದಿ ಸರ್ಕಾರದ ಕಣ್ತೆರೆಸಿತು. ಅದಕ್ಕಾಗಿ ಪತ್ರಿಕೆಗೆ ಈ ಭಾಗದ ಜನರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ’ ಎಂದರು.

‘ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರಿನ ಸೌಕರ್ಯ, ಶಾಲೆ, ಕಾಲೇಜು, ಆಟದ ಮೈದಾನ ಅಭಿವೃದ್ಧಿಯಾಗಬೇಕಿದೆ. ಇದಕ್ಕಾಗಿ ಹೋರಾಟ ಮಾಡಿ ಜಾಗ ಮೀಸಲಿರಿಸಿದ್ದೇವೆ’ ಎಂದರು.

ಚುನಾವಣಾ ಆಯೋಗಕ್ಕೆ ಪತ್ರ
ಈ ನಾಲ್ಕು ಬಡಾವಣೆಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿರುವ ಕಾರಣ ಇಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸರ್ಕಾರ ಪತ್ರ ಬರೆದಿದೆ.

ಆಯೋಗದ ಕಾರ್ಯದರ್ಶಿಗೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರು ಶುಕ್ರವಾರ ಸಂಜೆಯೇ ಪತ್ರ ಬರೆದು ಕೋರಿದ್ದಾರೆ.

**

ಜನರ ಬಹುವರ್ಷಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಈ ಬಡಾವಣೆಗಳು ಪಾಲಿಕೆ ವ್ಯಾಪ್ತಿಗೆ ಸೇರಿದ್ದರಿಂದ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಅನುಕೂಲವಾಗಲಿದೆ.
-ಆರ್‌.ಮಂಜುನಾಥ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.