ADVERTISEMENT

ಕಣ್ವ ವಂಚನೆ: ಸಿಐಡಿ ಹೆಗಲಿಗೆ?

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 19:18 IST
Last Updated 4 ನವೆಂಬರ್ 2019, 19:18 IST

ಬೆಂಗಳೂರು: ಕಣ್ವ ಸಮೂಹ ಸಂಸ್ಥೆಯ ಶ್ರೀ ಕಣ್ವ ಸೌಹಾರ್ದ ಕೋ–ಆಪರೇಟಿವ್ ಸೊಸೈಟಿ ವಿರುದ್ಧ ದಾಖಲಾಗಿರುವ ವಂಚನೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಶೀಘ್ರ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಸೊಸೈಟಿ ಸದಸ್ಯರು ನೀಡಿರುವ ದೂರು ಆಧರಿಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಸಂಸ್ಥಾಪಕ ಎನ್‌.ನಂಜುಂಡಯ್ಯ ಅವರನ್ನು ಬಸವೇಶ್ವರನಗರ ಠಾಣೆ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ಅವರನ್ನು ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಪೊಲೀಸರು ಸೋಮವಾರ ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣದಲ್ಲಿ ₹ 100 ಕೋಟಿಗೂ ಹೆಚ್ಚು ವಂಚನೆ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ, ತನಿಖೆಯನ್ನು ಸಿಐಡಿಗೆ ವಹಿಸುವುದು ಸೂಕ್ತವೆಂದು ಪೊಲೀಸ್‌ ಹಿರಿಯ ಅಧಿಕಾರಿಗಳು ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ.

ADVERTISEMENT

‘ಆ್ಯಂಬಿಡೆಂಟ್ ಕಂಪನಿ ಸೇರಿದಂತೆ ಹಲವು ವಂಚನೆ ಪ್ರಕರಣಗಳ ತನಿಖೆಯನ್ನು ಈಗಾಗಲೇ ಸಿಐಡಿಗೆ ವರ್ಗಾಯಿಸಲಾಗಿದೆ. ಅಂಥ ಪ್ರಕರಣಗಳ ಮಾದರಿಯಲ್ಲಿ ಶ್ರೀ ಕಣ್ವ ಸೌಹಾರ್ದ ಕೋ–ಆಪರೇಟಿವ್ ಸೊಸೈಟಿ ವಂಚನೆ ನಡೆದಿದೆ. ಈ ಪ್ರಕರಣವು ಸಿಐಡಿಗೆ ವಹಿಸಲು ಸೂಕ್ತವಾಗಿದೆ’ ಎಂದು ಪತ್ರದಲ್ಲಿ ಹಿರಿಯ ಅಧಿಕಾರಿಗಳು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.