ADVERTISEMENT

‘ಕರಾಚಿ’ ಬೇಕರಿ ಪ್ರಕರಣ; 9 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2019, 20:20 IST
Last Updated 24 ಫೆಬ್ರುವರಿ 2019, 20:20 IST
ಕರಾಚಿ ಹೆಸರು ಕಾಣದಂತೆ ಬ್ಯಾನರ್ ಕಟ್ಟಿರುವುದು
ಕರಾಚಿ ಹೆಸರು ಕಾಣದಂತೆ ಬ್ಯಾನರ್ ಕಟ್ಟಿರುವುದು   

ಬೆಂಗಳೂರು: ಇಂದಿರಾನಗರ 100 ಅಡಿ ರಸ್ತೆಯಲ್ಲಿರುವ ‘ಕರಾಚಿ ಬೇಕರಿ ಆ್ಯಂಡ್ ಕೆಫೆ’ ಎದುರು ಪ್ರತಿಭಟನೆ ನಡೆಸಿ, ಬೇಕರಿಯ ಹೆಸರು ಬದಲಿಸುವಂತೆ ಮಾಲೀಕರಿಗೆ ಬೆದರಿಕೆ ಹಾಕಿದ್ದ ಆರೋಪದಡಿ ಒಂಬತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಫೆ.22ರ ಸಂಜೆ 7 ಗಂಟೆ ಸುಮಾರಿಗೆ ಸುಮಾರು 30 ಯುವಕರ ಗುಂಪು ಬೇಕರಿ ಎದುರು ಪ್ರತಿಭಟನೆ ನಡೆಸಿತ್ತು. ‘ಇತ್ತೀಚೆಗೆ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ 49 ಯೋಧರು ಹುತಾತ್ಮರಾಗಿದ್ದಾರೆ. ಇಂಥ ನೀಚ ಕೃತ್ಯಕ್ಕೆ ಕಾರಣವಾದ ಪಾಕಿಸ್ತಾನದ ಹೆಸರಿನಲ್ಲಿ ಇಲ್ಲಿ ವ್ಯಾಪಾರ ನಡೆಸಲು ಬಿಡುವುದಿಲ್ಲ. ‘ಕರಾಚಿ’ ಎಂಬ ಹೆಸರನ್ನು ಬದಲಾಯಿಸದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ಯುವಕರು ಬೆದರಿಸಿದ್ದರು.

ಈ ವೇಳೆ ಬೇಕರಿ ನೌಕರರು ತಿರುಗಿಬಿದ್ದಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಆಗ ಮಧ್ಯಪ್ರವೇಶಿಸಿದ್ದ ಮಾಲೀಕರು, ‘ನಾವು 1953ರಿಂದ ಈ ಬೇಕರಿ ನಡೆಸುತ್ತಿದ್ದೇವೆ. ಈಗ ಏಕಾಏಕಿ ನೀವು ದಾಳಿ ನಡೆಸಿ ಹೆಸರು ಕಿತ್ತು ಹಾಕುವಂತೆ ಹೇಳಿದರೆ ಹೇಗೆ’ ಎಂದು ಪ್ರಶ್ನಿಸಿದ್ದರು. ಪ್ರತಿಭಟನಾಕಾರರು ಮಾತು ಕೇಳದಿದ್ದಾಗ, ಮಾಲೀಕರು ‘ಕರಾಚಿ’ ಹೆಸರು ಕಾಣದಂತೆ ಬ್ಯಾನರ್ ಕಟ್ಟಿಸಿದ್ದರು. ಅಲ್ಲದೇ, ಕಟ್ಟಡದ ಗಾಜಿಗೆ ಭಾರತದ ರಾಷ್ಟ್ರ ಧ್ವಜವನ್ನು ಕಟ್ಟಿ ಪರಿಸ್ಥಿತಿ ತಿಳಿಗೊಳಿಸಿದ್ದರು.

ADVERTISEMENT

ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಆ ಯುವಕರ ಗುಂಪು ಜಾಗ ಖಾಲಿ ಮಾಡಿತ್ತು. ಬೇಕರಿ ವ್ಯವಸ್ಥಾಪಕ ಎಸ್.ಆನಂದ್‌ರೆಡ್ಡಿ ಕೊಟ್ಟ ದೂರಿನ ಅನ್ವಯ ಕೊಲೆ ಬೆದರಿಕೆ (ಐಪಿಸಿ 506) ಹಾಗೂ ಉದ್ದೇಶ ಪೂರ್ವಕವಾಗಿ ಶಾಂತಿ ಕದಡಿದ (504) ಆರೋಪಗಳಡಿ ಎಫ್‌ಐಆರ್ ದಾಖಲಿಸಿಕೊಂಡ ಇಂದಿರಾನಗರ ಪೊಲೀಸರು, ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯಾವಳಿ ಆಧರಿಸಿ 9 ಮಂದಿಯನ್ನು ಬಂಧಿಸಿದ್ದಾರೆ.

ಬಾಬಾಜಿ, ಶ್ರೀಹರಿ, ಪ್ರವೀಣ್, ಶ್ರೇಯಪ್ಪ, ಶಿವಕುಮಾರ್, ಗುಣಶೇಖರ್, ಲಕ್ಷ್ಮಣ್, ಸಂಜಯ್ ಹಾಗೂ ನವೀನ್ ಎಂಬುವರನ್ನು ಬಂಧಿಸಲಾಗಿದೆ. ಎಲ್ಲರೂ ಹಲಸೂರು ನಿವಾಸಿಗಳಾಗಿದ್ದು, ‘ನಾವೆಲ್ಲ ಸೈನಿಕರ ಪರ ಹೋರಾಟ ನಡೆಸುತ್ತಿರುವ ಸಂಘಟನೆಯೊಂದರ ಸದಸ್ಯರು’ ಎಂದು ಹೇಳಿಕೊಂಡಿದ್ದಾರೆ. ಅದು ಇನ್ನೂ ಖಚಿತವಾಗಿಲ್ಲ ಎಂದು ಇಂದಿರಾನಗರ ಪೊಲೀಸರು ಮಾಹಿತಿ ನೀಡಿದರು.

‘ನಾವೂ ಭಾರತೀಯರು’

‘ಭಾರತ–ಪಾಕಿಸ್ತಾನ ವಿಭಜನೆಯಾದ ಸಂದರ್ಭದಲ್ಲಿ ಭಾರತಕ್ಕೆ ವಲಸೆ ಬಂದ ಖಾನ್‌ಚಂದ್ ರಮಾಣಿ ಎಂಬುವರು, 1953ರಲ್ಲಿ ಹೈದರಾಬಾದ್‌ನಲ್ಲಿ ‘ಕರಾಚಿ ಬೇಕರಿ’ ಪ್ರಾರಂಭಿಸಿದರು. ರುಚಿ ಹಾಗೂ ಶುದ್ಧತೆಗೆ ಬೇಕರಿ ಜನಮನ್ನಣೆ ಪಡೆದಿದ್ದರಿಂದ ಕ್ರಮೇಣ ವಿವಿಧ ರಾಜ್ಯಗಳಲ್ಲಿ ಶಾಖೆಗಳನ್ನು ತೆರೆಯಲಾಯಿತು. ನಗರದಲ್ಲಿ ಮಹದೇವಪುರ ಹಾಗೂ ಇಂದಿರಾನಗರದಲ್ಲೂ ನಮ್ಮ ಬೇಕರಿಗಳಿವೆ. ಹೆಸರು ‘ಕರಾಚಿ’ ಎಂದಿದ್ದರೂ, ನಾವೆಲ್ಲ ಭಾರತೀಯರೇ. ಈ ದೇಶವನ್ನು ಹೃದಯದಿಂದ ಪ್ರೀತಿಸುತ್ತೇವೆ. ಪ್ರೀತಿಸುತ್ತಲೇ ಇರುತ್ತೇವೆ’ ಎಂದು ‘ಕರಾಚಿ ಬೇಕರಿ’ ಮಾಲೀಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.