ADVERTISEMENT

ಕಾರಂತ ಬಡಾವಣೆ | 2,282 ಎಕರೆ ಸ್ವಾಧೀನ: ಸುಪ್ರೀಂ ಕೋರ್ಟ್‌ಗೆ ಬಿಡಿಎ ಪ್ರಮಾಣಪತ್ರ

ಕಾರಂತ ಬಡಾವಣೆ ನಿರ್ಮಾಣ: ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ

ಮಂಜುನಾಥ್ ಹೆಬ್ಬಾರ್‌
Published 7 ಸೆಪ್ಟೆಂಬರ್ 2022, 19:32 IST
Last Updated 7 ಸೆಪ್ಟೆಂಬರ್ 2022, 19:32 IST
.
.   

ನವದೆಹಲಿ: ಬೆಂಗಳೂರಿನಲ್ಲಿ ಡಾ. ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಭೂಸ್ವಾಧೀನ ಅಧಿಕಾರಿಗಳು ಈವರೆಗೆ 2,562 ಎಕರೆ 10 ಗುಂಟೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದಾರೆ. 2,282 ಎಕರೆ ಜಾಗವನ್ನು ಬಿಡಿಎ ಸ್ವಾಧೀನಕ್ಕೆ ಪಡೆದಿದೆ.

ಬಡಾವಣೆ ನಿರ್ಮಾಣ ಕಾರ್ಯದಲ್ಲಿ ಆಗಿರುವ ಪ್ರಗತಿ ಕುರಿತುಬಿಡಿಎ ಆಯುಕ್ತ ಜಿ.ಕುಮಾರ್ ನಾಯ್ಕ್‌ ಅವರು ಸುಪ್ರೀಂ ಕೋರ್ಟ್‌ಗೆ ಸೆಪ್ಟೆಂಬರ್‌ 5ರಂದು ಪ್ರಮಾಣಪತ್ರ ಸಲ್ಲಿಸಿದ್ದಾರೆ. ‘ಸ್ವಾಧೀನಕ್ಕೆ ಪಡೆದ ಜಮೀನುಗಳನ್ನು ಎಂಜಿನಿಯರಿಂಗ್‌ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ವಿಶೇಷ ಭೂಸ್ವಾಧೀನ ಅಧಿಕಾರಿಗಳ ಜತೆಗೆ ಆಗಸ್ಟ್‌ 26 ಹಾಗೂ ಸೆಪ್ಟೆಂಬರ್ 2ರಂದು ಸಭೆಗಳನ್ನು ನಡೆಸಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಲು ಸೂಚಿಸಲಾಗಿದೆ’ ಎಂದು ಅವರು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಬಡಾವಣೆಯೊಳಗೆ ಸಂಪರ್ಕಕ್ಕೆ 45 ಎಕರೆ: ಬಡಾವಣೆಯೊಳಗೆ ರಸ್ತೆ ನಿರ್ಮಾಣಕ್ಕೆ 45 ಎಕರೆ 17 ಗುಂಟೆ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಈ ಸಂಬಂಧ ಆಗಸ್ಟ್‌ 6ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ನಾಲ್ಕು ವಾರಗಳಲ್ಲಿ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್‌ ಆಗಸ್ಟ್‌ 25ರಂದು ಆದೇಶ ಹೊರಡಿಸಿದೆ.

ADVERTISEMENT

→ಭೂಮಾಲೀಕರಿಂದ→2,500 ಅರ್ಜಿ:→ಕಂದಾಯ ನಿವೇಶನದ→ಮಾಲೀಕರಿಂದ→ಈವರೆಗೆ 2,500→ಅರ್ಜಿಗಳು ಸಲ್ಲಿಕೆಯಾಗಿವೆ. 303 ಅರ್ಜಿಗಳು ಆನ್‌ಲೈನ್‌ ಮೂಲಕ ಹಾಗೂ 2,197 ಅರ್ಜಿಗಳು ಸಹಾಯವಾಣಿಗೆ ಸಲ್ಲಿಕೆಯಾಗಿವೆ. ಭೂಮಾಲೀಕತ್ವದ ನೈಜತೆ ಪರಿಶೀಲನೆ ನಡೆಸುವಂತೆ ಭೂಸ್ವಾಧೀನ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಈ ಪೈಕಿ, ಸ್ಥಳ ಪರಿಶೀಲನೆ ನಡೆಸಿ ಈವರೆಗೆ 662 ಅರ್ಜಿಗಳನ್ನು ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಸಮಿತಿಗೆ ಹಸ್ತಾಂತರಿಸಲಾಗಿದೆ. ಈ ಸಮಿತಿಯು 15 ಕಂದಾಯ ಬಡಾವಣೆಗಳನ್ನು ಪರಿಶೀಲನೆ ನಡೆಸಿ ಏಳು ಕರಡು ವರದಿಗಳ ಮೂಲಕ ಅಭಿಪ್ರಾಯಗಳನ್ನು ಪ್ರಾಧಿಕಾರದ ನಗರ ಯೋಜನಾ ವಿಭಾಗಕ್ಕೆ ಸಲ್ಲಿಸಿದೆ. ಈ ಬಡಾವಣೆಗಳನ್ನು ಸಂಯೋಜನೆಗೊಳಿಸುವ ವಿಧಾನಗಳ ಬಗ್ಗೆ ನಗರ ಯೋಜನಾ ವಿಭಾಗ ಪರಿಶೀಲನೆ ನಡೆಸುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಅಧಿಸೂಚನೆ ಹೊರಡಿಸದ 245 ಎಕರೆ 16 ಗುಂಟೆ ಜಾಗ ಸ್ವಾಧೀನದ ಪ್ರಾಥಮಿಕ ಅಧಿಸೂಚನೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ಭೂಸ್ವಾಧೀನಕ್ಕೆ ಭೂಮಾಲೀಕರಿಗೆ ನೋಟಿಸ್‌ ನೀಡಲಾಗಿದೆ. ಆಕ್ಷೇಪಣೆ
ಗಳನ್ನು ಪರಿಶೀಲಿಸಿದ ಬಳಿಕ
ಅಂತಿಮ ಅಧಿಸೂಚನೆ ಹೊರಡಿಸಲು ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ವಿನಾಯಿತಿ ಕೇಳಿರುವ ಬಿಡಿಎ: ಬಡಾವಣೆ ನಿರ್ಮಾಣಕ್ಕಾಗಿ 66 ಎಕರೆ 17 ಗುಂಟೆ ಸರ್ಕಾರಿ ಜಾಗ ಸ್ವಾಧೀನಕ್ಕೆ ಸರ್ಕಾರ ಆದೇಶ ಹೊರಡಿಸಿದೆ. ಈ ಜಾಗದ ಶೇ 50ರಷ್ಟು ಮೊತ್ತವನ್ನು ಪ್ರಾಧಿಕಾರ ಭರಿಸುವಂತೆ ಸರ್ಕಾರ ಸೂಚಿಸಿದೆ. ಈ ಮೊತ್ತವನ್ನು ಮನ್ನಾ ಮಾಡುವಂತೆ ಪ್ರಾಧಿಕಾರವು 2022ರ ಫೆಬ್ರುವರಿಯಲ್ಲಿ ಸರ್ಕಾರಕ್ಕೆ ಪತ್ರ ಬರೆದಿದೆ. ಸರ್ಕಾರದ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದಾರೆ.

ತಾಂತ್ರಿಕ ಬಿಡ್ ತೆರೆದ ಪ್ರಾಧಿಕಾರ

ಶಿವರಾಮ ಕಾರಂತ ಬಡಾವಣೆಯನ್ನು 17 ವಿವಿಧ ಗ್ರಾಮಗಳ ಸರ್ವೆ ನಂಬರ್‌ಗಳಲ್ಲಿ ಪರಿಷ್ಕೃತ ಅಂದಾಜು ವೆಚ್ಚದಲ್ಲಿ ರಚಿಸುವ ಯೋಜನೆಗೆ ಕರ್ನಾಟಕ ಸರ್ಕಾರ ಜುಲೈ 8ರಂದು ಅನುಮೋದನೆ ನೀಡಿತ್ತು. ಒಟ್ಟು 3,546 ಎಕರೆ 12 ಗುಂಟೆಯಲ್ಲಿ ಬಡಾವಣೆ ರಚಿಸಲು ₹5,337 ಕೋಟಿ ಮೊತ್ತದ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿತ್ತು.

ಪ್ರಾಧಿಕಾರವು ಕರ್ನಾಟಕ ಸರ್ಕಾರದ ಇಲಾಖೆ ಅಲ್ಲ. ಹಾಗಾಗಿ, ಬೆಂಗಳೂರಿನಲ್ಲಿ ಡಾ.ಶಿವರಾಮ ಕಾರಂತ ಬಡಾವಣೆಗೆ ಟೆಂಡರ್ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರದ ಆಡಳಿತಾತ್ಮಕ ಅನುಮೋದನೆ ಪಡೆಯುವ ಅಗತ್ಯ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಆಗಸ್ಟ್‌ 12ರಂದು ಸ್ಪಷ್ಟಪಡಿಸಿತ್ತು.

ಬಡಾವಣೆ ನಿರ್ಮಾಣಕ್ಕಾಗಿ 9 ಪ್ಯಾಕೇಜ್‌ಗಳ ಟೆಂಡರ್‌ ಬಿಡ್‌ಗಳು ಸಲ್ಲಿಕೆಯಾಗಿವೆ. ಸೆಪ್ಟೆಂಬರ್‌ 3ರಂದು ತಾಂತ್ರಿಕ ಬಿಡ್‌ ತೆರೆಯಲಾಗಿದ್ದು, ಮೌಲ್ಯಮಾಪನ ನಡೆಸಲಾಗುತ್ತಿದೆ. ಎರಡು ವಾರಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಬಳಿಕ ಆರ್ಥಿಕ ಬಿಡ್‌ ಪ್ರಕ್ರಿಯೆ ನಡೆಸಲಾಗುವುದು ಎಂದು ಕುಮಾರ್‌ ನಾಯ್ಕ್‌ ತಿಳಿಸಿದ್ದಾರೆ.

ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಸಂಪೂರ್ಣ ಭೂಮಿಗೆ ಆರು ವಾರಗಳ ಒಳಗೆ ಅರ್ಹತಾ ಪ್ರಮಾಣಪತ್ರಗಳನ್ನು ಪ್ರಾಧಿಕಾರ ನೀಡಬೇಕು ಎಂದೂ ಸುಪ್ರೀಂ ಕೋರ್ಟ್‌ ಆಗಸ್ಟ್‌ 12ರಂದುನಿರ್ದೇಶನ ನೀಡಿತ್ತು.

86 ಭೂಮಾಲೀಕರಿಗೆ ಅರ್ಹತಾ ಪತ್ರ: ಅರ್ಹತಾ ಪ್ರಮಾಣಪತ್ರಕ್ಕಾಗಿ ಇಲ್ಲಿಯವರೆಗೆ 418 ಅರ್ಜಿ ಸಲ್ಲಿಕೆ ಆಗಿವೆ. ಈ ಪೈಕಿ, 86 ಮಂದಿಗೆ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಭೂಮಾಲೀಕತ್ವದ ದಾಖಲೆಗಳನ್ನು ಸಲ್ಲಿಸುವಂತೆ 332 ಭೂಮಾಲೀಕರಿಗೆ ನೋಟಿಸ್‌ಗಳನ್ನು ನೀಡಲಾಗಿದೆ. ಭೂಮಾಲೀಕತ್ವದ ಬಗ್ಗೆ ಕೆಲವು ಪ್ರಕರಣ ಗಳಲ್ಲಿ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಇಂತಹ ಪ್ರಕರಣ ಗಳಲ್ಲಿ ಭೂಸ್ವಾಧೀನ ಅಧಿಕಾರಿಗಳು ಭೂಮಾಲೀಕರಿಂದ ದಾಖಲೆಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸಿ ಪ್ರಮಾಣಪತ್ರ ನೀಡಲಿದ್ದಾರೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.