ADVERTISEMENT

ಕೆಎಫ್‌ಸಿಎಸ್‌ಸಿ ಲೇಬರ್ಸ್‌ ಯೂನಿಯನ್‌ನಿಂದ ಪ್ರತಿಭಟನೆ ಎಚ್ಚರಿಕೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 19:37 IST
Last Updated 4 ಜುಲೈ 2022, 19:37 IST

ಬೆಂಗಳೂರು: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಗ್ರಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಲೋಡಿಂಗ್‌ ಮತ್ತು ಅನ್‌ಲೋಡಿಂಗ್‌ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ಫುಡ್‌ ಆ್ಯಂಡ್‌ ಸಪ್ಲೈ ಕಾರ್ಪೊರೇಷನ್ (ಕೆಎಫ್‌ಸಿಎಸ್‌ಸಿ) ಲೋಡಿಂಗ್ ಆ್ಯಂಡ್ ಅನ್‌ಲೋಡಿಂಗ್ ಲೇಬರ್ಸ್‌ ಯೂನಿಯನ್ ಆಗ್ರಹಿಸಿದೆ.

ರಾಜ್ಯದ ಉಗ್ರಾಣಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಇಎಸ್‌ಐ., ಪಿ.ಎಫ್ ಕಾರ್ಮಿಕ ಕಾಯ್ದೆಗಳನ್ನು ಅನುಷ್ಠಾನಗೊಳಿಸಿಲು ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಇಲಾಖೆ ಆಯುಕ್ತರಾಗಲಿ ಸಚಿವರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂಘಟನೆ ಅಧ್ಯಕ್ಷ ಜಿ.ಆರ್. ಶಿವಶಂಕರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಪದಾರ್ಥಗಳ ಬೆಲೆ ಏರಿಕೆಯಿಂದ ಜೀವನ ನಿರ್ವಹಿಸಲು ಕಷ್ಟವಾಗಿದೆ. ಒಂದು ಕ್ವಿಂಟಲ್‌ ತೂಕದ ಮೂಟೆಗಳನ್ನು ಅನ್‌ಲೋಡ್‌ ಮಾಡಲು 2018ರಲ್ಲಿ ನಿಗದಿಪಡಿಸಿರುವ ₹16 ಕೂಲಿಯನ್ನು ₹25ಕ್ಕೆ ಹೆಚ್ಚಿಸಬೇಕು. ಭಾರತ ಆಹಾರ ನಿಗಮದಿಂದ ಬರುವ ಅನ್‌ಲೋಡಿಂಗ್ ದರವನ್ನು ₹8ರಿಂದ ₹13ಕ್ಕೆ ಹೆಚ್ಚಿಸಬೇಕು. ಕಾರ್ಮಿಕ ಕಾಯ್ದೆಯ ಪ್ರಕಾರ ಕೆಲಸದ ಸಮಯ, ರಜೆ ಮತ್ತು ನಿವೃತ್ತ ಕಾರ್ಮಿಕರಿಗೆ ಗ್ರಾಚ್ಯುಟಿ ಸೌಲಭ್ಯನ್ನು ಒದಗಿಸಬೇಕು. ಕಾರ್ಮಿಕರ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡಬೇಕು ಎಂದು ಸಂಘಟನೆ ಪ್ರಧಾನ ಕಾರ್ಯದರ್ಶಿ ಅಹಮದ್ ಒತ್ತಾಯಿಸಿದರು.

ADVERTISEMENT

ರಾಜ್ಯದ 191 ಕೆಎಫ್‌ಸಿಎಸ್‌ಸಿ ಉಗ್ರಾಣಗಳಲ್ಲಿ ಕೆಲಸ ಮಾಡುತ್ತಿರುವ 2,150 ಲೋಡಿಂಗ್‌ ಆ್ಯಂಡ್‌ ಅನ್‌ಲೋಡಿಂಗ್‌ ಕಾರ್ಮಿಕರಿಗೆ ಕನಿಷ್ಠ ಮೂಲಸೌಕರ್ಯ ಒದಗಿಸುತ್ತಿಲ್ಲ.
1970ರ ಕಾರ್ಮಿಕ ಕಾಯ್ದೆ ಉಲ್ಲಂಘನೆ ಮಾಡಿರುವ ಜಂಟಿ ನಿರ್ದೇಶಕರು, ಉಪನಿರ್ದೇಶಕರು, ಜಿಲ್ಲಾ
ವ್ಯವಸ್ಥಾಪಕರು ಹಾಗೂ ಉಗ್ರಾಣ
ವ್ಯವಸ್ಥಾಪಕರ ಮೇಲೆ ಶಿಸ್ತು
ಕ್ರಮಗಳನ್ನು ಕೈಗೊಳ್ಳಬೇಕು. 15 ದಿನಗಳಲ್ಲಿ ನಮ್ಮ ಬೇಡಿಕೆಗಳನ್ನು
ಈಡೇರಿಸದಿದ್ದರೆ ರಾಜ್ಯದ ಎಲ್ಲಾ ಉಗ್ರಾಣಗಳ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.